ಚಿಟ್ಟೆಗಳು ಮತ್ತು ಪತಂಗಗಳು

	ಇವುಗಳು ಆತ್ರ್ರಾಪೋಡ ವಿಭಾಗದ, ಹೆಕ್ಸಾಪೋಡ ಅಥವಾ ಇನ್ಸೆಕ್ಟ  ವರ್ಗದ, ಲೆಪಿಡಾಪ್ಟೆರಾ  (ಐeಠಿiಜoಠಿಣeಡಿಚಿ) ಗಣಕ್ಕೆ ಸೇರಿದ ಕೀಟಗಳು. ಕೀಟ ವರ್ಗದಲ್ಲಿ ಹೆಚ್ಚು ಸುಂದರವಾದ ಹಾಗೂ ಜನಪ್ರಿಯವಾದಂತಹ ಕೀಟಗಳು, ಪ್ರಪಂಚದಲ್ಲಿ ಸುಮಾರು 140,000 ಜಾತಿಯ ಚಿಟ್ಟೆಗಳು ಮತ್ತು ಪತಂಗಗಳಿವೆ. ಸಂಖ್ಯೆಯ ದೃಷ್ಟಿಯಿಂದ ಇವಕ್ಕೆ ಕೀಟವರ್ಗದಲ್ಲಿ ಎರಡನೆಯ ಸ್ಥಾನವಿದೆ. ಮೊದಲ ಸ್ಥಾನ 350,000 ಪ್ರಭೇದಗಳನ್ನೊಳಗೊಂಡ ಹಾಗೂ ಕೋಲಿಯೋಪ್ಟೆರಾ ಗಣಕ್ಕೆ ಸೇರಿದ ಜೀರುಂಡೆಗಳದ್ದು (ಬೀಟಲ್ಸ್)  

ಚಿಟ್ಟೆ ಹಾಗೂ ಪತಂಗಗಳಲ್ಲಿರುವ ಸಾಮ್ಯತೆ 
ಚಿಟ್ಟೆಗಳ ಹಾಗೂ ಪತಂಗಗಳ ಸಾಮಾನ್ಯ ಲಕ್ಷಣಗಳೆಂದರೆ-
1)ದೇಹವನ್ನು ತಲೆ, ಎದೆ ಹಾಗೂ ಹೊಟ್ಟೆಗಳಾಗಿ ವಿಂಗಡಿಸಬಹುದು.
2)ಎರಡು ಜೊತೆ ರೆಕ್ಕೆಗಳು
3)ರೆಕ್ಕೆಗಳ ಹಾಗೂ ಉಪಾಂಗಗಳ ಮೇಲೆ ಹುರುಪೆಗಳ (ಸ್ಕೇಲ್ಸ್) ಹೊದಿಕೆ ಇದೆ.
4)ತಲೆಯ ಮುಂಭಾಗದಲ್ಲಿ ಹೀರುಕೊಳುವೆ (ಪ್ರೊಬೋಸಿಸ್) ಅಥವಾ ಸೊಂಡಿಲಿದೆ.
5)ರೂಪಪರಿವರ್ತನೆ ಸಂಪೂರ್ಣ ರೀತಿಯದು.(ಕಂಪ್ಲೀಟ್ ಮೆಟಮಾರ್ಪಾಸಿಸ್)

ಚಿಟ್ಟೆಗಳು ಹಾಗೂ ಪತಂಗಗಳು ಬೇರೆ ಬೇರೆ ಉಪವರ್ಗಕ್ಕೆ ಸೇರಿದಂತಹ ಕೀಟಗಳು. ಸಾಮಾನ್ಯವಾಗಿ ಪತಂಗಗಳು ರಾತ್ರಿ ವೇಳೆಯಲ್ಲಿ ಚಟುವಟಿಕೆಯಿಂದ ಕೂಡಿರುತ್ತವಾದರೂ, ಕೆಲವು ಪ್ರಭೇದಗಳು ದಿನದಲ್ಲಿಯೂ ಚುರುಕಾಗಿರುತ್ತವೆ. ವಿಕಾಸದ ಹಾದಿಯಲ್ಲಿ ಪತಂಗಗಳು ಚಿಟ್ಟೆಗಳಿಗಿಂತ ಮೊದಲು ಬರುತ್ತವೆ. ಚಿಟ್ಟೆಗಳ ವಿಕಾಸನದ ಮೇಲೆ ಹಲವು ಸಿದ್ಧಾಂತಗಳಿವೆ. ಒಂದು ಸಿದ್ಧಾಂತವು-``ಕೆಲವು ಪತಂಗ ಪ್ರಭೇದಗಳು, ಬಾವಲಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ದಿನದಲ್ಲಿ ಹಾರಲು ಶುರುಮಾಡಿ ನಂತರ ಚಿಟ್ಟೆಗಳಾಗಿ ಮಾರ್ಪಾಡು ಹೊಂದಿದವು ಎಂದು ಹೇಳುತ್ತದೆ. ಈ ರೀತಿಯ ಹಲವು ಸಿದ್ಧಾಂತಗಳಿದ್ದರೂ ಯಾವುದೇ ಸಿದ್ಧಾಂತವು ಚಿಟ್ಟೆಗಳ ವಿಕಸನದ ಬಗ್ಗೆ ನಿರ್ದಿಷ್ಟವಾಗಿ ಹೇಳುವುದಿಲ್ಲ. ``ಬಟರ್‍ಫ್ಲೈ-ಮಾತ್ ಎಂಬ ಗುಂಪಿಗೆ ಸೇರಿದ ಪ್ರಭೇದಗಳು ಪತಂಗ ಹಾಗೂ ಚಿಟ್ಟೆಗಳ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಅವಕ್ಕೆ ಆ ಹೆಸರು ಬಂದಿದೆ.

ಚಿಟ್ಟೆ ಮತ್ತು ಪತಂಗಗಳಲ್ಲಿರುವ ವ್ಯತ್ಯಾಸ- ಚಿಟ್ಟೆಗಳಿಗೆ ಹಾಗೂ ಪತಂಗಗಳಿಗೆ ಇರುವ ಪ್ರಮುಖ ವ್ಯತ್ಯಾಸಗಳೆಂದರೆ-
1) ಚಿಟ್ಟೆಗಳ ಮೀಸೆ ಅಥವಾ ಗ್ರಹಿಸುವ ಅಂಗ (ಆಂಟಿನಾ) ತುದಿಯಲ್ಲಿ ದಪ್ಪಗಿರುತ್ತದೆ ಮತ್ತು ಕೆಲವು ಚಿಟ್ಟೆಗಳಲ್ಲಿ ಅದು ತುದಿಯಲ್ಲಿ ಡೊಂಕಾಗಿರುತ್ತದೆ. ಪತಂಗಗಳ ಮೀಸೆ ಅಥವಾ ಗ್ರಹಿಸುವ ಅಂಗ ಕೂದಲಿನಿಂದ ಕೂಡಿದ್ದು, ತುದಿಯಲ್ಲಿ ದಪ್ಪಗಿರದೆ ಸಣ್ಣ, ಎಳೆಗಳಂತೆ ಇರುತ್ತದೆ.

2) ಕುಳಿತುಕೊಳ್ಳುವಾಗ ಚಿಟ್ಟೆಗಳು ತಮ್ಮ ರೆಕ್ಕೆಗಳನ್ನು ಜೋಡಿಸಿಕೊಂಡು ಕೂರುತ್ತವೆ ಪತಂಗಗಳು ಕುಳಿತುಕೊಳ್ಳುವಾಗ ರೆಕ್ಕೆಗಳನ್ನು ಹರಡಿಕೊಂಡು ಕೂರುತ್ತದೆ. ಕೆಲವು ಚಿಟ್ಟೆಗಳೂ ಸಹ ಕೂರುವಾಗ ರೆಕ್ಕೆ ಅಗಲಿಸಿ ಕೂರುವ ಕಾರಣ, ಈ ಒಂದು ಕಾರಣದಿಂದ ಚಿಟ್ಟೆಗಳನ್ನು ಪತಂಗಗಳಿಂದ ಪ್ರತ್ಯೇಕಿಸುವುದು ಸಾಧ್ಯವಿಲ್ಲ.

3) ಚಿಟ್ಟೆಗಳ ಹೊಟ್ಟೆ ಸಣ್ಣದಾಗಿದ್ದು, ಸೊಂಟವು ಎದ್ದು ಕಾಣುತ್ತದೆ, ಆದರೆ ಪತಂಗಗಳಲ್ಲಿ ಹೊಟ್ಟೆಯು ದಪ್ಪದಾಗಿದ್ದು, ಸೊಂಟವನ್ನು ಹೊಟ್ಟೆಯಿಂದ ಪ್ರತ್ಯೇಕಿಸುವುದು ಕಷ್ಟಸಾಧ್ಯ.

4) ಸುಮಾರು ಎಲ್ಲಾ ಚಿಟ್ಟೆಗಳು ದಿನದಲ್ಲಿ ಹೆಚ್ಚು ಚಟುವಟಿಕೆಯಿಂದ ಕೂಡಿದ್ದರೆ, ಪತಂಗಗಳ ಚಟುವಟಿಕೆ ರಾತ್ರಿ ಹೆಚ್ಚು.
ಹೆಸ್ಪರಿಡೆ ಕುಟುಂಬಕ್ಕೆ ಸೇರಿದ ಚಿಟ್ಟೆಗಳು ಪತಂಗಗಳಿಗೆ ಹೋಲುವ ಕಾರಣ, ಈ ಕುಟುಂಬಕ್ಕೆ ಸೇರಿದ ಹಲವು ಪ್ರಭೇದಗಳನ್ನು ಪತಂಗಗಳಿಂದ ಪ್ರತ್ಯೇಕಿಸುವುದು ಕಷ್ಟ.

ನಾವು ಮೊಟ್ಟೆ, ಕಂಬಳಿಹುಳ ಹಾಗೂ ಕೋಶದಲ್ಲಿ ಕೂಡ ಅನೇಕ ವ್ಯತ್ಯಾಸವನ್ನು ಕಾಣಬಹುದು-

1. ಚಿಟ್ಟೆಯ ಮೊಟ್ಟೆಗಳು ದುಂಡಗೆ, ಬಾಟಲಿಯ ಆಕಾರದಲ್ಲಿ ಅಥವಾ ಗೋಪುರದ ಆಕಾರದಲ್ಲಿ ಇರುತ್ತವೆ. ಪತಂಗಗಳ ಮೊಟ್ಟೆಗಳು ದುಂಡಗೆ ಹಾಗೂ ಚಪ್ಪಟೆಯಾಗಿರುತ್ತವೆ.

2. ಚಿಟ್ಟೆಗಳ ಕಂಬಳಿಹುಳುಗಳು ಮೂರು ಜೋಡಿ ನಿಜವಾದ ಪಾದಗಳು (ಟ್ರೂ ಲೆಗ್ಸ್ - ಇವೆ ಮುಂದೆ ಕಾಲುಗಳಾಗುವುದು) ಮತ್ತು ನಾಲ್ಕು ಜೋಡಿ ಪ್ರೊಪಾದಗಳನ್ನು  (Pಡಿoಟegs) ಹೊಂದಿರುತ್ತವೆ.

ಪತಂಗಗಳ ಕಂಬಳಿಹುಳುಗಳಲ್ಲಿ ಮೂರು ಜೋಡಿ ನಿಜವಾದ ಪಾದಗಳಿದ್ದು, ಪ್ರೊಪಾದಗಳು ಒಂದರಿಂದ ನಾಲ್ಕು ಜೋಡಿಗಳು ಇರುತ್ತವೆ.

3. ಸಾಮಾನ್ಯವಾಗಿ ಚಿಟ್ಟೆಗಳು ಕೋಶವನ್ನು (ಪ್ಯೂಪ) ಮಾಡಿ ಅದರಲ್ಲಿ ರೂಪಪರಿವರ್ತನೆಗೊಳ್ಳುತ್ತವೆ. ಆದರೆ ಪತಂಗಗಳು ಮೊಟ್ಟೆ ಆಕಾರದ ಕೊಕೂನ್‍ಗಳನ್ನು ಮಾಡಿ ಅದರಲ್ಲೇ ವಯಸ್ಕ ಪತಂಗಗಳಾಗಿ ಮಾರ್ಪಾಡಾಗುತ್ತವೆ.

ಚಿಟ್ಟೆಯ ಜೀವನಚಕ್ರ : ಚಿಟ್ಟೆಯ ಜೀವನಚಕ್ರವು 4 ಹಂತಗಳನ್ನು ಒಳಗೊಂಡಿದ್ದು, ಸಂಪೂರ್ಣ ರೀತಿಯದಾಗಿದೆ. ಆ ನಾಲ್ಕು ಹಂತಗಳೆಂದರೆ ಮೊಟ್ಟೆ, ಕಂಬಳಿಹುಳ, ಕೋಶಾವಸ್ಥೆ ಹಾಗೂ ವಯಸ್ಕ ಚಿಟ್ಟೆ ಅಥವಾ  ಚಿಟ್ಟೆ.

ಮೊಟ್ಟೆ : ಎಲ್ಲಾ ಚಿಟ್ಟೆಗಳು ಮೊಟ್ಟೆಗಳ ಮೂಲಕ ಸಂತಾನ ವೃದ್ಧಿ ಮಾಡುತ್ತವೆ. ಕೆಲವು ಮಾತ್ರ ಮೊಟ್ಟೆಗಳನ್ನು ಹೊರಗಡೆ ಇಡದೆ ದೇಹದೊಳಗೆ ಇರಿಸಿಕೊಂಡು ಮರಿ ಮಾಡುವುದುಂಟು. ಚಿಟ್ಟೆಗಳು ಸಮಾನ್ಯವಾಗಿ ಎಲೆಗಳ ಕೆಳಗೆ, ಟೊಂಗೆಗಳ ಮೇಲೆ, ಹೂಗಳ ಮೇಲೆ ಹಾಗೂ ಹಣ್ಣುಗಳ ಮೇಲೆ ಕೂಡ ಇಡುತ್ತವೆ. ಕೆಲವು ಚಿಟ್ಟೆಗಳು ಒಂದೇ ಗಿಡದಲ್ಲಿ ತನ್ನ ಎಲ್ಲಾ  ಮೊಟ್ಟೆಗಳನ್ನು ಇಟ್ಟರೆ, ಮತ್ತೆ ಕೆಲವು 10ರಿಂದ 50 ಮೊಟ್ಟೆಗಳನ್ನು ಬೇರೆ ಬೇರೆ ಗಿಡಗಳಲ್ಲಿ ಇಡುತ್ತವೆ. ವಯಸ್ಕ ಹೆಣ್ಣು ಚಿಟ್ಟೆಗಳಲ್ಲಿ ಪೂರ್ಣ ರೂಪುಗೊಂಡ ಮೊಟ್ಟೆಗಳು ಅಂಡನಾಳದ ಮೂಲಕ ಸಾಗಿ ಯೋನಿಯೊಳಗೆ ಬರುತ್ತವೆ. ಹೆಣ್ಣು ಹಾಗೂ ಗಂಡು ಚಿಟ್ಟೆಗಳು ಕೂಡಿದಾಗ ಗಂಡಿನ ಶುಕ್ರಾಣುಗಳು ``ಆಸ್ಟಿಮಮ್ ಬರ್ಸೀ ಎಂಬ ದ್ವಾರದ ಮೂಲಕ ಹೆಣ್ಣಿನ ದೇಹದೊಳಗೆ ಬಂದು ``ಬರ್ಸ ಕೌಪ್ಯುಲೇಟ್ರಿಕ್ಸ್ ಎಂಬ ಶುಕ್ರಾಣು ಸಂಗ್ರಹ ಚೀಲದಲ್ಲಿ ಶೇಖರವಾಗುತ್ತವೆ. ಈ ಚೀಲದಲ್ಲಿ ಶುಕ್ರಾಣುಗಳು ಅನೇಕ ವಾರ ಅಥವಾ ತಿಂಗಳುಕಾಲ ಸಂಗ್ರಹವಾಗಿರಬಲ್ಲವು. ಈ ಶುಕ್ರಾಣು ಚೀಲದಿಂದ ಯೋನಿಗೆ ಸೂಕ್ಷ್ಮನಾಳವೊಂದು ಹೋಗುತ್ತದೆ. ಮೊಟ್ಟೆಗಳು ಇಡುವ ಕಾಲ ಬಂದಾಗ ಅವು ಒಂದೊಂದಾಗಿ ಯೋನಿಯ ಮುಖಾಂತರ ಹೊರಬರುತ್ತವೆ. ಹೀಗೆ ಬರುವಾಗ ಶುಕ್ರಾಣು ಸಂಗ್ರಹ ಚೀಲದಿಂದ ಶುಕ್ರಾಣುಗಳು ಸಾಗಿಬಂದು ಮೊಟ್ಟೆಗಳನ್ನು ನಿಷೇಚಿಸುತ್ತವೆ. ಮೊಟ್ಟೆಗಳ ಆಕಾರ ವಿವಿಧ ಕುಟುಂಬಗಳಲ್ಲಿ ವಿವಿಧ ರೀತಿಯಲ್ಲಿ ಇರುತ್ತವೆ. ಸಾಮನ್ಯವಾಗಿ ಮೊಟ್ಟೆಗಳು ಬಿಳಿ, ಹಳದಿ, ಕಂದು ಅಥವಾ ಹಸಿರು ಬಣ್ಣವನ್ನು ಹೊಂದಿರುತ್ತವೆ. ಕೆಲವು ಪತಂಗಗಳು ತಮ್ಮ ಮೊಟ್ಟೆಗಳ ಮೇಲೆ ಕೂದಲುಗಳಿಂದ ರಚಿತವಾದ ಒಂದು ರೀತಿಯ ಕವಚವನ್ನು ಹೊಂದಿಸುವುದುಂಟು. ಕೆಲವು ಪ್ರಭೇದಗಳಲ್ಲಿ ಇಂಥ ಕೂದಲುಗಳು ವಿಷಪೂರಿತವಾಗಿದ್ದು, ಅವನ್ನು ತಿನ್ನಬಂದ ಪ್ರಾಣಿಗಳಿಗೆ ತೀವ್ರ ತುರಿಕೆಯನ್ನುಂಟು ಮಾಡಿ ಮೊಟ್ಟೆಗಳಿಗೆ ರಕ್ಷಣೆ ನೀಡುತ್ತವೆ. ಮೊಟ್ಟೆಗಳು ಒಡೆಯಲು ಎರಡರಿಂದ ನಾಲ್ಕು ದಿನಗಳು ಬೇಕು.

ಕಂಬಳಿಹುಳ : ಕಂಬಳಿಹುಳುಗಳಿಗೆ ಡಿಂಭಗಳು ಎಂದೂ ಕೂಡ ಕರೆಯುತ್ತಾರೆ. ಇವುಗಳ ದೇಹವು ತಲೆ, ಎದೆ ಹಾಗೂ ಉದರ ಎಂಬ 3 ಭಾಗಗಳಿಂದ ಕೂಡಿದೆ. ಎದೆ ಮತ್ತು ಉದರಗಳ ನಡುವಣ ವ್ಯತ್ಯಾಸ ಸ್ಪಷ್ಟವಾಗಿಲ್ಲ. ಎದೆ ಭಾಗದಲ್ಲಿ 3 ಖಂಡಗಳು ಹಾಗೂ ಉದರ ಭಾಗದಲ್ಲಿ 11 ಖಂಡಗಳಿವೆ. ತಲೆಯು 5 ಖಂಡಗಳಿಂದ ಕೂಡಿದ್ದರೂ, ಈ ಖಂಡಗಳು ಒಂದಕ್ಕೊಂದು ಕೂಡಿಕೊಂಡಿರುವ ಕಾರಣ ಒಂದೆ ರಚನೆಯಂತೆ ಕಾಣುತ್ತದೆ. ತಲೆಯ ಎರಡೂ ಕಡೆಗಳಲ್ಲಿ 6 ಸರಳ ಕಣ್ಣುಗಳಿವೆ. ಇವಕ್ಕೆ ಸ್ಟೆಮಾಟ ಅಥವಾ ಆಸಿಲೈ ಎಂದು ಹೆಸರು. ಇದರ ಮೂತಿಯ ತುದಿಯಲ್ಲಿ ಒಂದು ಜೊತೆ ಬಲವಾದ ಮ್ಯಾಂಡಿಬೆಲ್ಲುಗಳು ಹಾಗೂ ಅವುಗಳ ಬುಡದಲ್ಲಿ ಒಂದು ಜೊತೆ ಗ್ರಹಿಸುವ ಅಂಗಗಳಿವೆ. ಮ್ಯಾಂಡಿಬೆಲ್ಲುಗಳ ಮುಂಭಾಗದಲ್ಲಿ ಮೇಲ್ದುಟಿಯಿದೆ. ಇದಕ್ಕೆ ಲೇಬ್ರಮ್ ಎಂದು ಕರೆಯುತ್ತಾರೆ. ಈ ಮ್ಯಾಂಡಿಬೆಲ್ಲುಗಳ ಹಿಂಭಾಗದಲ್ಲಿ ಮೊದಲ ಮ್ಯಾಕ್ಸಿಲೀ, ಲೇಬಿಯಮ್ ಹಾಗೂ ಹೈಪೋಫ್ಯಾರಿಂಕ್ಸಿನಿಂದ ಕೂಡಿ ರಚಿತವಾದ ಕೆಳದುಟಿಯಿದೆ.ಇದರ ಮಧ್ಯಭಾಗದಲ್ಲಿ ``ಸಿನರೆಟ್ ಎಂಬ ಅಂಗವಿದೆ. ಕೋಶ ರಚನೆಗೆ ಅತ್ಯಗತ್ಯವಾದ ರೇಷ್ಮೆಯು ಇದರಲ್ಲಿ ತಯಾರಾಗುತ್ತದೆ. ಎದೆಯ ಭಾಗದ ಪ್ರತಿಯೊಂದು ಖಂಡದಲ್ಲಿ ಒಂದೊಂದು ಜೊತೆ ಕಾಲುಗಳಿದ್ದು, ಇವಕ್ಕೆ ನಿಜವಾದ ಪಾದಗಳೆಂದು ಕರೆಯುತ್ತಾರೆ. ಉದರ ಭಾಗದ 3,4,5 ಮತ್ತು 6ನೆಯ ಖಂಡಗಳಲ್ಲಿ ಒಂದು ಜೊತೆ ಕಾಲುಗಳಿದ್ದು, ಇವಕ್ಕೆ ಪ್ರೊಲೆಗ್ಸ್‍ಗಳು ಎಂದು ಕರೆಯುತ್ತಾರೆ. ಉದರದ 11ನೆಯ ಖಂಡದಲ್ಲಿ ``ಕ್ಲಾಸ್ಪೆರ್ಸ್ ಎಂಬ ಅಂಗವಿದ್ದು, ಅದು ಕೋಶರಚನೆಯ ಸಮಯದಲ್ಲಿ ಕಂಬಳಿಹುಳುವು ಕೊಂಬೆಯಿಂದ ನೇತಾಡಲು ಸಹಾಯ ಮಾಡುತ್ತದೆ. ಕಂಬಳಿಹುಳುಗಳ ವರ್ಗೀಕರಣದಲ್ಲಿ ಕಾಲುಗಳ ಸಂಖ್ಯೆ, ಜೋಡಣಾಕ್ರಮ ಮತ್ತು ಗಾತ್ರಗಳು ಅತ್ಯಂತ ಪ್ರಮುಖ ಲಕ್ಷಣಗಳಾಗಿವೆ. ಕಂಬಳಿ ಹುಳುಗಳ ಮೇಲ್ಮೈ ನಿರ್ದಿಷ್ಟಕ್ರಮದಲ್ಲಿ ಜೋಡಣೆಗೊಂಡ ಬಿರುಗೂದಲುಗಳಿಂದ ಆವೃತವಾಗಿದೆ. ಬಿರುಗೂದಲುಗಳ ಜೋಡಣೆ ಬೇರೆ ಬೇರೆ ಪ್ರಭೇದಗಳಲ್ಲಿ ವಿಭಿನ್ನವಾಗಿದ್ದು, ಇವುಗಳ ಸಹಾಯದಿಂದ ಕೂಡ ಕಂಬಳಿ ಹುಳಗಳನ್ನು ಗುರುತಿಸಬಹುದಾಗಿದೆ. ಅನೇಕ ಕಂಬಳಿಹುಳುಗಳು ತನ್ನ ಸುತ್ತವಿರುವ ಪರಿಸರಕ್ಕೆ ಹೊಂದಿಕೊಳ್ಳುವ ಬಣ್ಣಗಳನ್ನು ಹೊಂದಿದ್ದು, ಅವುಗಳನ್ನು ಗಿಡಗಳಲ್ಲಿ ಹುಡುಕಿ ಗುರುತಿಸುವುದು ಕಷ್ಟ. ಅನೇಕ ಕಂಬಳಿಹುಳುಗಳು ಹಸಿರು ಹಾಗೂ ಕಂದು ಬಣ್ಣವನ್ನು ಹೊಂದಿದ್ದು ಅವುಗಳ ದೇಹ ರಚನೆ ಎಲೆ ಮತ್ತು ಟೊಂಗೆಗಳನ್ನು ಹೋಲುತ್ತವೆ. ಇಂತಹ ಕಂಬಳಿಹುಳುಗಳು ವಿಶ್ರಾಂತಿ ತೆಗೆದುಕೊಳ್ಳುವಾಗ ಟೊಂಗೆಗಳ ಮೇಲೇರಿ ಸೆಟೆದು ನಿಂತು, ಮುರಿದ ಟೊಂಗೆಗಳ ಅನುಕರಣೆ ಮಾಡುತ್ತೆ. ಮತ್ತೆ ಕೆಲವು ಕಂಬಳಿಹುಳುಗಳು ಕಪ್ಪು, ಬಿಳುಪು ಬಣ್ಣಗಳನ್ನು ಹೊಂದಿದ್ದು ಹಕ್ಕಿಯ ಹಿಕ್ಕೆಯನ್ನು ಅನುಕರಣೆ ಮಾಡುತ್ತವೆ. ಕೆಲವು ಕಂಬಳಿಹುಳುಗಳು ಪರಿಸರದ್ದೇ ಬಣ್ಣಗಳನ್ನು ಹೊಂದಿದ್ದರೆ, ಮತ್ತೆ ಕೆಲವು ವಿಷಪೂರಿತ ಕಂಬಳಿಹುಳುಗಳು ವರ್ಣರಂಜಿತವಾಗಿರುತ್ತವೆ. ಕೆಲವು ಕಂಬಳಿಹುಳಗಳು ತಮ್ಮ ವರ್ತನೆಯಿಂದ ಹಾವುಗಳ ಚಲನೆಯನ್ನು ಅನುಕರಣೆ ಮಾಡುತ್ತವೆ. ``ಲೈಸಿನಿಡೇ ಅಥವಾ ``ನೀಲಿಗಳು ಕುಟುಂಬಕ್ಕೆ ಸೇರಿದ ಕಂಬಳಿಹುಳಗಳು ಮೈಮೇಲೆ ಒಂದು ರೀತಿಯ ಸಿಹಿದ್ರವ್ಯವನ್ನು ಸ್ರವಿಸುತ್ತವೆ. ಇದರಿಂದ ಆಕರ್ಷವಾದ ಕೆಲವು ಇರುವೆ ಪ್ರಭೇದಗಳು, ಇಂತಹ ಕಂಬಳಿಹುಳುಗಳನ್ನು ತಮ್ಮ ಗೂಡಿನಲ್ಲಿ ಸಾಕಿಕೊಂಡು ಅವನ್ನು ಕಣಜ ಹಾಗೂ ಇತರ ಕೀಟಗಳಿಂದ ರಕ್ಷಿಸುತ್ತವೆ. ಕೆಲವು ಕಂಬಳಿಹುಳಗಳ ಮೇಲೆ ವಿಷಪೂರಿತ ರೋಮಗಳಿರುತ್ತವೆ. ಇಂತಹ ರೋಮವು ಚರ್ಮಕ್ಕೆ ತಾಕಿದರೆ ತುರಿಕೆ ಉಂಟಾಗಿ, ಆನಂತರ ಉರಿಯುವ ಗುಳ್ಳೆಗಳಾಗುತ್ತವೆ. ಕೆಲವು ಕಂಬಳಿಹುಳುಗಳು, ಶತ್ರುಗಳಿಂದ ರಕ್ಷಿಸಿಕೊಳ್ಳಲು ಅಸಹ್ಯತರ ಘಾಟು ವಾಸನೆ ಬೀರುತ್ತವೆ.

ಕಂಬಳಿಹುಳಗಳು ತಮ್ಮ ಅತ್ಯಧಿಕ ಸಮಯವನ್ನು ತಿನ್ನುತ್ತಲೇ ಕಳೆಯುತ್ತವೆ. ಕಂಬಳಿಹುಳವು ತನ್ನ `ಆಹಾರ ಸಸ್ಯವನ್ನು ಮಾತ್ರ ತಿಂದು ಬದುಕುತ್ತವೆ. ಕೆಲವು ಕಂಬಳಿಹುಳಗಳು ಒಂದು ಕುಟುಂಬಕ್ಕೆ ಸೇರಿದ ಹಲವು ಸಸ್ಯಗಳನ್ನು ತಿಂದರೆ, ಮತ್ತೆ ಕೆಲವು, ಬೇರೆಬೇರೆ ಕುಟುಂಬಕ್ಕೆ ಸೇರಿದ ಸಸ್ಯಗಳನ್ನು ತಿಂದು ಬದುಕುತ್ತವೆ. ``ಮಿಲಿಟಿನೇ ಉಪಕುಟುಂಬಕ್ಕೆ ಸೇರಿದ ``ಏಪ್‍ಫ್ಲೈ ಚಿಟ್ಟೆಯ ಕಂಬಳಿಹುಳುಗಳು ಚಿಕ್ಕಚಿಕ್ಕ ಕ್ರಿಮಿಗಳನ್ನು ತಿಂದು ಬದುಕುತ್ತವೆ. ಹಾವುಗಳಂತೆ ಕಂಬಳಿಹುಳುಗಳು ಪೊರೆ ಕಳಚುತ್ತವೆ. ಅವು ಕೋಶ ರಚಿಸುವ ಮುನ್ನ 5 ಬಾರಿ ಪೊರೆ ಕಳಚುತ್ತವೆ. ಒಂದು ಪೊರೆ ಕಳಚುವಿಕೆ ಮತ್ತು ಅದರ ಮುಂದಿನ ಪೊರೆ ಕಳಚುವಿಕೆಯ ನಡುವಿನ ಹಂತವನ್ನು ``ಇನ್‍ಸ್ಟಾರ್ ಎಂದು ಕರೆಯುತ್ತಾರೆ. ಎಲ್ಲಾ ಬಗೆಯ ಕಂಬಳಿಹುಳಗಳೂ ರೇಷ್ಮೆಯನ್ನು ತಯಾರಿಸುತ್ತವೆ. ರೂಪಪರಿವರ್ತನೆಯ ಸಮಯದಲ್ಲಿ ಕೋಶವನ್ನು ರಚಿಸಲು ರೇಷ್ಮೆಯು ಅತ್ಯಗತ್ಯ. ಇದಲ್ಲದೆ ಕೆಲವೊಮ್ಮೆ ಕಂಬಳಿಹುಳಗಳು ತಾವು ಎಲೆಗಳ ಹಾಗೂ ಟೊಂಗೆಗಳ ಮೇಲೆ ಓಡಾಡುವಾಗ ದಾರಿಯನ್ನು ನೆನಪಿನಲ್ಲಿ ಇಟ್ಟಿಕೊಳ್ಳಲು ಕೂಡ ಈ ರೇಷ್ಮೆಯನ್ನು ಬಳಸುವುದುಂಟು. ರೇಷ್ಮೆಯು ಕಪ್ಪು, ಹಸಿರು, ಹಳದಿ, ಕಂದು ಮುಂತಾದ ಅನೇಕ ಬಣ್ಣಗಳನ್ನು ಪಡೆದಿರಬಹುದು. ಈ ಬಣ್ಣಗಳಿಗೆ ಕಾರಣ ಅವುಗಳು ತಿನ್ನುವ ಆಹಾರದಲ್ಲಿನ ಪ್ಲೇವೋನ್, ಕ್ಯೌರೋಟಿನ್ ಮತ್ತು ಕ್ಯಾಂತೋಫಿಲ್ಗಳು. ಕಂಬಳಿಹುಳವು ಸುಮಾರು 15 ರಿಂದ 40 ದಿನಗಳಲ್ಲಿ ಕೋಶವನ್ನು ರಚಿಸುತ್ತವೆ.

ಕೋಶಾವಸ್ಥೆ : ಸಂಪೂರ್ಣವಾಗಿ ಬೆಳೆದ ಕಂಬಳಿಹುಳವು, ಆಹಾರಸೇವನೆ ನಿಲ್ಲಿಸಿ, ಸೂಕ್ತ ಸ್ಥಳ ಹುಡುಕಿ ಅಲ್ಲಿ ಕೋಶವನ್ನು ರಚಿಸುತ್ತದೆ. ಹಲವು ಪತಂಗಗಳು ಭೂಮಿಯಲ್ಲಿ ಕೋಶ(ಅoಛಿooಟಿ) ರಚಿಸಿದರೆ, ಚಿಟ್ಟೆಗಳ ಕಂಬಳಿಹುಳಗಳು ಸಾಮಾನ್ಯವಾಗಿ ಗಿಡಗಳ ಟೊಂಗೆಗಳಿಗೆ ಹೊಂದಿಕೊಂಡಂತೆ ಕೋಶವನ್ನು (Puಠಿಚಿ) ರಚಿಸುತ್ತವೆ. ``ಹೆಸ್ಪರಿಡೇ ಅಥವಾ ಜಿಗಿತಗಾರ ಚಿಟ್ಟೆಗಳ ಕುಟುಂಬಕ್ಕೆ ಸೇರಿದ ಹಲವು ಕಂಬಳಿಹುಳಗಳು ಎಲೆಯನ್ನು ಮಡಚಿ ಅದನ್ನೇ ಕೋಶವನ್ನಾಗಿ ಬಳಸುತ್ತವೆ. ಪ್ರತಿಯೊಂದು ಪ್ರಭೇದದ ಕೋಶವು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿರುವ ಕಾರಣ, ಕೋಶದ ಮೂಲಕ ಕೂಡ ಚಿಟ್ಟೆ ಪ್ರಭೇದವನ್ನು ಗುರುತಿಸಬಹುದು. ಕಂಬಳಿಹುಳವು ಕೋಶದಲ್ಲಿ ರೂಪಪರಿವರ್ತನೆಗೊಳ್ಳುತ್ತಿರುವಾಗ ಹೊರಗಡೆಯಿಂದ ಚಿಟ್ಟೆಯ ಹಲವು ಭಾಗಗಳನ್ನು ಗುರುತಿಸಬಹುದು. ಮೀಸೆ, ಸೊಂಡಿಲು, ರೆಕ್ಕೆಗಳು ಹಾಗೂ ಕಾಲುಗಳು ಕೋಶದ ಕೆಳಭಾಗದಲ್ಲಿ ಹಿಮ್ಮುಖವಾಗಿ ಚಾಚಿಕೊಂಡಿರುತ್ತವೆ. ಕಣ್ಣುಗಳಿರುವ ಕಡೆ ಕೋಶವು ಉಬ್ಬಿಕೊಂಡಿರುತ್ತದೆ. ಚಿಟ್ಟೆಗಳ ಕೋಶಗಳು ವಿವಿಧ ಆಕಾರ ಹಾಗೂ ವಿವಿಧ ವರ್ಣಗಳನ್ನು ಹೊಂದಿದ್ದು, ಕೆಲವು ಕೋಶಗಳು ಮುಳ್ಳುಗಳು ಹಾಗೂ ಸುಂದರವಾದ ಬಣ್ಣ ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಕೋಶದ ರಚನೆಯಾದೊಡನೆ ಕಂಬಳಿಹುಳವು ಚಿಟ್ಟೆಯಾಗಿ ಮಾರ್ಪಾಡು ಹೊಂದುವುದಿಲ್ಲ ಹಲವು ಪ್ರಭೇದಗಳಲ್ಲಿ ಕೋಶದೊಳಗೆ ಚಳಿಗಾಲ ಪೂರ್ತಿ, ಅದೇ ಅವಸ್ಥೆಯಲ್ಲಿ ಕಳೆದು, ನಂತರ ವಸಂತದಲ್ಲಿ ವಾತಾವರಣದ ಉಷ್ಣತೆಯು  ಹೆಚ್ಚುತ್ತಿದ್ದಂತೆಯೇ ಚಿಟ್ಟೆಯಾಗಿ ಮಾರ್ಪಾಡಾಗುತ್ತದೆ, ಇಂತಹ ಪ್ರಭೇದಗಳಲ್ಲಿ ಅನುಕೂಲಕರ ವಾತಾವರಣ ಬರುವವರೆಗೆ ಕಂಬಳಿಹುಳುವಿನ ಬೆಳವಣಿಗೆ ಸ್ಥಗಿತಗೊಂಡಿರುತ್ತದೆ. ಇದಕ್ಕೆ ತಾತ್ಕಾಲಿಕ ಸುಪ್ತತೆ (ಡಯಾಪೋಸ್) ಎಂದು ಕರೆಯುತ್ತಾರೆ. ತಾತ್ಕಾಲಿಕ ಸುಪ್ತತೆಯ ಕ್ರಿಯಾತಂತ್ರ ಬಲು ಸಂಕೀರ್ಣ ರೀತಿಯದು. ಚಿಟ್ಟೆಯ ತಲೆ ಮತ್ತು ಪ್ರೋತೊರಾಕ್ಸಿನಲ್ಲಿನ ಕೆಲವು ರಸಗ್ರಂಥಿ ವಾತಕಗಳು ಉತ್ಪಾದಿಸುವ ಹಾರ್ಮೋನುಗಳಿಂದ ಈ ಚಟುವಟಿಕೆ ನಿಯಂತ್ರಿತವಾಗಿದೆ. ಪರಿಸರದ ನಿರ್ದಿಷ್ಟ ಪ್ರಚೋದನೆಗಳಿಂದ ಮಿದುಳಿನ ಕೆಲವು ನರಸ್ರಾವಕ (ನ್ಯೂರೋಸೆಕ್ರೆಟರಿ) ಕೋಶಗಳು ಉತ್ತೇಜಿತವಾಗಿ, ವಿಶಿಷ್ಟ ರೀತಿಯ ಸ್ರಾವಗಳು ಬಿಡುಗಡೆ ಆಗುತ್ತದೆ. ಇವು ರಕ್ತದ ಮೂಲಕ ಸಾಗಿ ಬಂದು ಪ್ರೋತೊರಾಕ್ಸಿನ ರಸಗ್ರಂಥಿಗಳನ್ನು ತಲುಪಿ ನಂತರ ಪ್ರಚೋದಿಸುತ್ತದೆ. ಇದರಿಂದ ವಿಶಿಷ್ಟ ರೀತಿಯ ಹಾರ್ಮೋನುಗಳು ಉತ್ಪನ್ನವಾಗಿ ಇವುಗಳ ಪ್ರಭಾವದಿಂದ ತಾತ್ಕಾಲಿಕ ಸುಪ್ತತೆ ಕೊನೆಗೊಳ್ಳುತ್ತದೆ. ತಾತ್ಕಾಲಿಕ ಸುಪ್ತತೆಯ ಅವಧಿ ಹೊರಗಿನ ಉಷ್ಣಾಂಶ,  ತೇವಾಂಶ ಹಾಗೂ ಇನ್ನಿತರ ಅಂಶಗಳ ಮೇಲೆ ನಿರ್ಧರಿತವಾಗಿರುತ್ತದೆ. ಕೋಶದಲ್ಲಿ ರೂಪಪರಿವರ್ತನೆಯು ಸಂಪೂರ್ಣ ಅಂತರ್ಮುಖಿ. ಅಂದರೆ ಈ ಹಂತದಲ್ಲಿ ಆಹಾರವನ್ನು ಸೇವಿಸುವುದಾಗಲಿ ಅಥವಾ ತ್ಯಾಜ್ಯವಸ್ತುಗಳನ್ನು ಹೊರ ಹಾಕುವುದು ಇರುವುದಿಲ್ಲ. ಎದೆಯ ಭಾಗದಲ್ಲಿರುವ ಸ್ಪೈರಕಲ್ಲುಗಳ ಸಹಾಯದಿಂದ ಕೋಶವು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಉಸಿರಾಟವನ್ನು ನಡೆಸುತ್ತದೆ. ಕೋಶಾವಸ್ಥೆಯಲ್ಲಿ ಯಾವುದೇ ರೀತಿಯ ವಿಸರ್ಜನಕ್ರಿಯೆ ನಡೆಯುವುದಿಲ್ಲ. ಸಾರಜನಕಯುಕ್ತ ನಿರುಪಯೋಗಿ ವಸ್ತುಗಳು ದ್ರವರೂಪದಲ್ಲಿ ಸಂಗ್ರಹವಾಗುತ್ತದೆ. ಈ ದ್ರವಕ್ಕೆ ಮಿಕೋನಿಯಮ್ ಎಂದು ಹೆಸರು. ಪ್ರೌಢ ಚಿಟ್ಟೆ ಕೋಶದಿಂದ ಹೊರ ಬರುವ ಮುನ್ನ ಮಿಕೋನಿಯಮ್ ವಿಸರ್ಜಿತವಾಗುತ್ತದೆ. ಕೆಲವು ಚಿಟ್ಟೆಗಳು ತಮ್ಮ ಮೀಸೆಯ ಬಳಿ ಇರುವ ``ಲೇಬಿಯಲ್ ಪಲ್ಪ್ ಎಂಬ ಅಂಗದ ಸಹಾಯದಿಂದ ಕೋಶವನ್ನು ಒಡೆದು ಹೊರಬಂದರೆ, ಮತ್ತೆ ಕೆಲವು ಮಿಕೋನಿಯಮ್ ದ್ರವದ ಒತ್ತಡ ಹೆಚ್ಚಾಗಿ ಕೋಶ ಒಡೆದಾಗ ಹೊರ ಬರುತ್ತವೆ. ಅತ್ಯಂತ ಮೃದುವಾದ ದೇಹವುಳ್ಳ ಹಾಗೂ ಸುಲಭವಾಗಿ ಹಾಳಾಗುವಂತಹ ರೆಕ್ಕೆಗಳನ್ನು ಹೊಂದಿರುವ ಚಿಲ್ಮೆಯು ಕೋಶದಿಂದ ಹೊರಬರುವುದು ಕಷ್ಟದ ಕೆಲಸ. ಕೆಲವು ಪತಂಗಗಳ ಕೋಶದ ತುದಿಯಲ್ಲಿ ಮುಚ್ಚಳ ಇರುವುದುಂಟು. ಮತ್ತೆ ಕೆಲವು ಪತಂಗಗಳು `ಕೌಸ್ಟಿಕ್ ಪೊಟಾಶ್ ದ್ರಾವಣವನ್ನು ಸ್ರವಿಸಿ ಕೋಶದ ತುದಿಯನ್ನು ಕರಗಿಸಿ ಹೊರಬರುತ್ತವೆ. ಕೋಶದಿಂದ ಮೊದಲು ತಲೆ ಮತ್ತು ಎದೆಯು ಹೊರಬರುತ್ತದೆ, ನಂತರ ತನ್ನ ಕಾಲುಗಳನ್ನು ಹೊರಚಾಚುತ್ತದೆ. ಅನಂತರ ಉದರವು ಹೊರಬರುತ್ತದೆ. ಮಿಕೋನಿಯಮ್ ದ್ರವದಿಂದ ಚಿಟ್ಟೆಯ ದೇಹವು ಪೂರ್ತಿ ಒದ್ದೆಯಾಗಿರುತ್ತದೆ.  ಆದ್ದರಿಂದ ಅವು ಹೊರಬಂದ ತಕ್ಷಣ ಹಾರಲು ಸಾಧ್ಯವಾಗುವುದಿಲ್ಲ ಇಂತಹ ಸಮಯದಲ್ಲಿ ಅವುಗಳು ತಮ್ಮ ನೈಸರ್ಗಿಕ ಶತ್ರುಗಳಿಗೆ ಆಹಾರವಾಗುವ ಸಂಭವ ಅತ್ಯಂತ ಹೆಚ್ಚು. ಚಿಟ್ಟೆಯು ಕೋಶದಿಂದ ಹೊರಬಂದ ನಂತರ ರೆಕ್ಕೆಗಳು ಕೆಳಮುಖವಾಗಿರುವಂತಹ ಭಂಗಿಯಲ್ಲಿ ತೂಗಿಬಿದ್ದು, ಅವನ್ನು ಒಣಗಿಸುತ್ತದೆ. ಇದಲ್ಲದೆ ರೆಕ್ಕೆಗಳಿಗೆ ರಕ್ತವು ನುಗ್ಗುವಂತೆ ಮಾಡಲು, ಸಾಕಷ್ಟು ಗಾಳಿಯನ್ನು ದೇಹದಲ್ಲಿ ತೆಗೆದುಕೊಂಡು, ಸ್ನಾಯುಗಳು ಸಂಕುಚಿಸಿ, ದೇಹದ ಒತ್ತಡ ಹೆಚ್ಚಿ, ರಕ್ತವು ರೆಕ್ಕೆಗಳನ್ನು ತಲುಪಿ, ರೆಕ್ಕೆಗಳು ವಿಸ್ತಾರಗೊಳ್ಳುತ್ತವೆ. ಸ್ವಲ್ಪ ಸಮಯದ ನಂತರ ರೆಕ್ಕೆಗಳು ಗಟ್ಟಿಯಾಗಿ ಚಿಟ್ಟೆಯು ಹಾರಲು ಸಿದ್ಧವಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 15 ರಿಂದ 60 ನಿಮಿಷ ಬೇಕಾಗುತ್ತದೆ. ಕಂಬಳಿಹುಳವು ಕೋಶದಲ್ಲಿ ಚಿಟ್ಟೆಯಾಗಿ ಮಾರ್ಪಾಡಾಗಲು 10 ರಿಂದ 20 ದಿನಗಳು ಬೇಕಾಗುತ್ತದೆ. ತಾತ್ಕಾಲಿಕ ಸುಪ್ತತೆ ಇದ್ದಲ್ಲಿ ರೂಪಪರಿವರ್ತನೆಗೆ ಹಲವು ತಿಂಗಳುಗಳೇ ಹಿಡಿಯುತ್ತದೆ.

ಪ್ರೌಢ ಚಿಟ್ಟೆ ಅಥವಾ ವಯಸ್ಕ ಚಿಟ್ಟೆ : ಚಿಟ್ಟೆಗಳು ಎಂದ ತಕ್ಷಣ ಬಹುಶಃ ಜ್ಞಾಪಕ ಬರುವುದು ಹೂವುಗಳು. ಚಿಟ್ಟೆಗಳು ಹೂವಿನ ಮೇಲೆ ಕುಳಿತುಕೊಂಡು ಮಕರಂದ ಹೀರುವುದನ್ನು ಎಲ್ಲರೂ ನೋಡಿರುತ್ತಾರೆ. ಅದಲ್ಲದೆ ಮಕ್ಕಳು ಚಿಟ್ಟೆಗಳ ಹಿಂದೆ ಓಡಿ ಹೋಗಿ ಅವುಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತಾರೆ. 

ದೇಹ ರಚನೆ : ಚಿಟ್ಟೆಗಳಿಗೆ ಎರಡು ಜೋಡಿ ರೆಕ್ಕೆಗಳಿದ್ದು, ಇವುಗಳಿಗೆ ಅಗ್ರರೆಕ್ಕೆಗಳು ಹಾಗೂ ಹಿಂದಿನ ರೆಕ್ಕೆಗಳು ಎಂದು ಕರೆಯುತ್ತಾರೆ. ಚಿಟ್ಟೆಗಳಿಗೆ ಆ್ಯಂಟೆನಾವಿದ್ದು ಇದು ಗ್ರಹಿಸುವ ಅಂಗವಾಗಿ ಕಾರ್ಯನಿರ್ವಹಿಸುತ್ತವೆ. ಚಿಟ್ಟೆಗಳಿಗೆ 3 ಜೊತೆ ಕಾಲುಗಳಿದ್ದು, ಕಾಲುಗಳಲ್ಲಿ ಕೂಡ ಗ್ರಹಿಸುವ ಅಂಗವಿರುತ್ತದೆ. ಸಾಮಾನ್ಯವಾಗಿ ಮೊಟ್ಟೆ ಇಡುವ ಸಮಯದಲ್ಲಿ ತಮ್ಮ ಆಹಾರಸಸ್ಯವನ್ನು ಗುರುತಿಸಲು ಚಿಟ್ಟೆಗಳು ತಮ್ಮ ಕಾಲುಗಳನ್ನು ಬಳಸುತ್ತವೆ. ಚಿಟ್ಟೆಗಳ ರೆಕ್ಕೆಗಳ ಮೇಲೆ ಶಲ್ಕಗಳಿದ್ದು, ಇವು ರೆಕ್ಕೆಗಳಿಗೆ ಬಣ್ಣವನ್ನು ನೀಡುತ್ತದೆ. ಬಣ್ಣವು ಚಿಟ್ಟೆಗಳನ್ನು ನೈಸರ್ಗಿಕ ಶತ್ರುಗಳಿಂದ ರಕ್ಷಿಸುತ್ತದೆ ಮತ್ತು ಕೂಡುವ ಸಮಯದಲ್ಲಿ ತನ್ನ ಪ್ರಭೇದದ ಹೆಣ್ಣು ಅಥವಾ ಗಂಡನ್ನು ಹುಡುಕಲು ನೆರವಾಗುತ್ತದೆ.

ಅಣಕೆಸುವಿಕೆ : ಚಿಟ್ಟೆಯ ಅಣಕಿಸುವಿಕೆಯಲ್ಲಿ ಎರಡು ಬಗೆ. ಎಲ್ಲಾ ವಿಷವಿರುವ ಚಿಟ್ಟೆಗಳು ಒಂದನ್ನೊಂದು ಹೋಲುವ ರೀತಿಯಲ್ಲಿ ಬಣ್ಣವನ್ನು ಹೊಂದಿದ್ದರೆ, ಅದಕ್ಕೆ ``ಮುಲೇರಿಯನ್ ಅಣಕೆಸುವಿಕೆ ಎಂದು ಹೆಸರು. ಹಾಗೆಯೇ ಒಂದು ವಿಷವಿರದ ಚಿಟ್ಟೆಯು, ವಿಷವಿರುವ ಚಿಟ್ಟೆಯನ್ನು ಅಣಕಿಸಿದರೆ ಅದಕ್ಕೆ ``ಬೆಟೀಶಿಯನ್ ಅಣಕೆಸುವಿಕೆ ಎಂದು ಕರೆಯುತ್ತಾರೆ.

ಆಹಾರ ಸೇವನೆ : ಚಿಟ್ಟೆಗಳಿಗೆ ಬೇಕಾದಂತಹ ಪ್ರೋಟೀನ್ ಹಾಗೂ ವಿಟಮಿನ್‍ಗಳು ಅವುಗಳು ಕಂಬಳಿಹುಳದ ಅವಸ್ಥೆಯಲ್ಲಿ ಇರಬೇಕಾದರೆ, ಎಲೆಗಳ ಮೂಲಕ ದೊರಕಿರುತ್ತದೆ. ಆದರೆ ಹಾರಲು ಬೇಕಾದ ಶಕ್ತಿಯನ್ನು ಉತ್ಪನ್ನ ಮಾಡುವ ಕಾರ್ಬೋಹೈಡ್ರೇಟ್‍ಗಳು ದೊರಕಿರುವುದಿಲ್ಲ.  ಈ ಕಾರ್ಬೋಹೈಡ್ರೇಟ್‍ಗಳನ್ನು ಪಡೆಯಲು ಚಿಟ್ಟೆಗಳು ಹೂಗಳ ಮಕರಂದವನ್ನು ತಮ್ಮ ಸೊಂಡಲಿನ ಮೂಲಕ ಹೀರುತ್ತವೆ. ಕೆಲವು ಚಿಟ್ಟೆ ಪ್ರಭೇದಗಳು ಹೂಗಳ ಬಳಿ ಹೋಗದೆ ಪ್ರಾಣಿಗಳ ಮೂತ್ರದ ಮೇಲೆ, ಮರಗಳಿಂದ ಸೋರುತ್ತಿರುವ ಅಂಟಿನ ಮೇಲೆ, ಪ್ರಾಣಿಗಳ ಕಳೆಬರಗಳ ಮೇಲೆ ಕುಳಿತುಕೊಂಡು ಅಲ್ಲಿರುವ ದ್ರವ್ಯವನ್ನು ಸೇವಿಸುತ್ತವೆ.

ಇದಲ್ಲದೆ ಹಲವು ಪ್ರಭೇದದ ಗಂಡು ಚಿಟ್ಟೆಗಳು ಮಣ್ಣಿನ ಮೇಲೆ ಕುಳಿತು ಲವಣಾಂಶವನ್ನು ಹೀರುತ್ತವೆ. ಇದಕ್ಕೆ ``ಮಣ್ಣು ಮುಕ್ಕುವಿಕೆ ಎಂದು ಕರೆಯುತ್ತಾರೆ. ಗಂಡು ಚಿಟ್ಟೆಯು ಹೆಣ್ಣು ಚಿಟ್ಟೆಯನ್ನು ಕೂಡಿದಾಗ ತಾನು ಶೇಖರಿಸಿದಂತಹ ಲವಣಾಂಶವನ್ನು ಮಾತ್ರೆಗಳ ರೂಪದಲ್ಲಿ ವರ್ಗಾಯಿಸುತ್ತವೆ. ನಂತರ ಹೆಣ್ಣು ಚಿಟ್ಟೆಗಳು ಈ ಲವಣಾಂಶವನ್ನು ಮೊಟ್ಟೆಗಳ ಮೇಲ್ಪದರ ರಚನೆಗೆ ಉಪಯೋಗಿಸಿಕೊಳ್ಳುತ್ತವೆ.

ಬಿಸಿಲು ಕಾಯಿಸುವುದು : ನಾವು ಹಲವು ಬಾರಿ ಟಾರ್ ರಸ್ತೆಗಳ ಮೇಲೆ, ಬಟ್ಟ ಬಯಲುಗಳಲ್ಲಿ ಹಾಗೂ ಎಲೆಗಳ ಮೇಲೆ ರೆಕ್ಕೆಗಳನ್ನು ಅಗಲಿಸಿಕೊಂಡು ಚಿಟ್ಟೆಗಳನ್ನು ನೋಡಿರುತ್ತೇವೆ. ಚಿಟ್ಟೆಯ ರೆಕ್ಕೆಗಳಲ್ಲಿ ರಕ್ತನಾಳಗಳಿರುತ್ತವೆ. ಚಿಟ್ಟೆಗಳ ನಿರಾಯಾಸವಾಗಿ ಹಾರಬೇಕಾದರೆ ರಕ್ತವು ಸರಾಗವಾಗಿ ಹರಿಯಬೇಕು. ರಕ್ತವು ಸರಾಗವಾಗಿ ಹರಿಯಬೇಕಾದರೆ ಅದರ ಉಷ್ಣತೆ ಹೆಚ್ಚಿರಬೇಕು. ಆದ್ದರಿಂದ ರಕ್ತದ ಉಷ್ಣಾಂಶವನ್ನು ಹೆಚ್ಚಿಸಲು ಚಿಟ್ಟೆಗಳು ಬಿಸಿಲು ಕಾಯಿಸುತ್ತವೆ. ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದರಿಂದ ಹಲವು ಚಿಟ್ಟೆಗಳು ತಮ್ಮ ಬಹುಕಾಲ ಎಲೆಗಳ ಕೆಳಗೆ ನೇತುಹಾಕಿಕೊಂಡು ಕಳೆಯುತ್ತವೆ. ಮತ್ತೆ ಕೆಲವು ಪ್ರಭೇದಗಳಲ್ಲಿ ಚಳಿಗಾಲ ಪೂರ್ತಿ ಕೋಶಾವಸ್ಥೆಯಲ್ಲಿದ್ದು, ಬೇಸಿಗೆ ಶುರುವಾದಾಗ ಮಾತ್ರ ಕೋಶದಿಂದ ಹೊರಬರುತ್ತವೆ.
ಸಂಗಾತಿ ಆಯ್ಕೆ : ಚಿಟ್ಟೆಗಳು ಎರಡು ರೀತಿಯಲ್ಲಿ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುತ್ತವೆ. ಒಂದು ರೀತಿಯಲ್ಲಿ ಗಂಡು ಚಿಟ್ಟೆಗಳು ಕೊಂಬೆಗಳ ಮೇಲೆ ಕುಳಿತು ಹೆಣ್ಣಿಗೆ ಕಾಯುತ್ತವೆ. ಇದಕ್ಕೆ `ಪರ್ಚಿಂಗ್ (ಠಿeಡಿಛಿhiಟಿg) ಎಂದು ಕರೆಯುತ್ತಾರೆ. ಮತ್ತೊಂದು ರೀತಿಯಲ್ಲಿ ಗಂಡು ಚಿಟ್ಟೆಗಳು ಹೆಣ್ಣುಗಳನ್ನು ಅರಸುತ್ತಾ ಗಸ್ತು ತಿರುಗುತ್ತವೆ. ಇದಕ್ಕೆ ``ಪೆಟ್ರೋಲಿಂಗ್  (Pಚಿಣಡಿoಟಟiಟಿg) ಎಂದು ಹೆಸರು. ಸಾಮಾನ್ಯವಾಗಿ ಹೆಣ್ಣು ಚಿಟ್ಟೆಗಳು ಬಲಿಷ್ಠವಾದ ಹಾಗೂ ಅತ್ಯಂತ ಸುಂದರವಾದ ಗಂಡುಗಳನ್ನು ತನ್ನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ಚಿಟ್ಟೆಗಳು ತಮ್ಮ ಸಂಗಾತಿಯನ್ನು ಗುರುತಿಸಲು ರಾಸಾಯನಿಕ ಸೂಚನೆಗಳನ್ನು ಹಾಗೂ ರೆಕ್ಕೆಗಳ ಬಣ್ಣಗಳನ್ನು ಬಳಸುತ್ತವೆ.

ಲೈಂಗಿಕ ಕ್ರಿಯೆ : ಗಂಡು ಚಿಟ್ಟೆಯು ಹೆಣ್ಣು ಚಿಟ್ಟೆಯನ್ನು ಆಕರ್ಷಿಸಿದ ನಂತರ ಅದನ್ನು ಗಿಡದ ಮೇಲೆ ತಳ್ಳಿ ಅದು ಹಾರದಂತೆ ಮಾಡಿ ನಂತರ ಕೂಡುತ್ತದೆ. ಕೂಡುವಾಗ ಗಂಡಿನ ಕೊಕ್ಕೆಯಂತಿರುವ ಅಂಗವು ಹೆಣ್ಣನ್ನು ಬಿಗಿಯಾಗಿ ಹಿಡಿದು ತನ್ನ ಜನನಾಂಗವು ಹೆಣ್ಣಿನ ಒಳಗೆ ಸರಾಗವಾಗಿ ಹೋಗುವಂತೆ ಮಾಡುತ್ತದೆ. ಇವುಗಳ ಕೂಡುವಿಕೆ ಹಲವು ನಿಮಿಶಗಳಿಂದ ಹಿಡಿದು ಹಲವು ಗಂಟೆಗಳ ಕಾಲ ಮುಂದುವರೆಯಬಹುದು. ಇವುಗಳು ಕೂಡಿರುವಾಗ ತೊಂದರೆ ಆದ ಪಕ್ಷದಲ್ಲಿ ಹೆಣ್ಣು ಗಂಡನ್ನು ಎತ್ತಿಕೊಂಡು ಹಾರುತ್ತದೆ. ಕೆಲವು ಪ್ರಭೇದಗಳಲ್ಲಿ ಗಂಡು ಹೆಣ್ಣನ್ನು ಎತ್ತಿಕೊಂಡು ಹಾರುತ್ತದೆ.

ಬಣ್ಣ ವ್ಯತ್ಯಾಸ ಮತ್ತು ಬಣ್ಣ ಬದಲಾವಣೆ : ಕೆಲವು ಪ್ರಭೇದದ ಚಿಟ್ಟೆಗಳು ತಮ್ಮ ದೇಹದ ಶಾಖವನ್ನು ನಿಯಂತ್ರಿಸಲು ಬಣ್ಣವನ್ನು ಬದಲಾಯಿಸುತ್ತವೆ, ಮತ್ತೆ ಕೆಲವು ಪ್ರಭೇದಗಳಲ್ಲಿ ಗಂಡು ಹಾಗೂ ಹೆಣ್ಣಿನಲ್ಲಿ ಬಣ್ಣ ವ್ಯತ್ಯಾಸ ಕಂಡುಬರುತ್ತದೆ.

ನಾವು ಚಿಟ್ಟೆಗಳ ಬಣ್ಣ ವ್ಯತ್ಯಾಸವನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದು. 
1. ಹೆಣ್ಣು ಮತ್ತು ಗಂಡಿನಲ್ಲಿನ ವ್ಯತ್ಯಾಸ : ಸಾಮಾನ್ಯವಾಗಿ ಗಂಡು ಚಿಟ್ಟೆಗಳು ಅತ್ಯಂತ ಹೊಳಪಿನಿಂದ ಕೂಡಿದ್ದು, ಅದೇ ಪ್ರಭೇದದ ಹೆಣ್ಣು ಚಿಟ್ಟೆಗಳು ಮಾಸಿದ ಬಣ್ಣವನ್ನು ಹೊಂದಿರುತ್ತವೆ. ಹೆಣ್ಣು ಚಿಟ್ಟೆಗಳು ಮೊಟ್ಟೆ ಇಡಬೇಕಾದ ಸಂದರ್ಭದಲ್ಲಿ ಅವುಗಳು ಒಂದೇ ಕಡೆ ಕೂರಬೇಕಾದ ಪರಿಸ್ಥಿತಿ ಬರುತ್ತದೆ. ಇಂತಹ ಸಮಯದಲ್ಲಿ ಅವುಗಳ ಬಣ್ಣ ಹೊಳಪಿನಿಂದ ಕೂಡಿದಲ್ಲಿ, ಅವುಗಳು ನೈಸರ್ಗಿಕ ಶತ್ರುಗಳಿಗೆ ಸುಲಭವಾದ ತುತ್ತಾಗುವ ಸಾಧ್ಯತೆಗಳು ಜಾಸ್ತಿ ಇರುತ್ತವೆ. ಆದ್ದರಿಂದ ಇದು ನೈಸರ್ಗಿಕ ಶತ್ರುಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹೆಣ್ಣು ಚಿಟ್ಟೆಗಳು ಮಾಡಿಕೊಂಡಿರುವ ನೈಸರ್ಗಿಕ ಹೊಂದಾಣಿಕೆ.

2. ಋತುಗಳಿಗೆ ತಕ್ಕಂತೆ ಆಗುವ ಬಣ್ಣ ಬದಲಾವಣೆ : ಕೆಲವು ಪ್ರಭೇದಗಳು ಋತುಗಳಿಗೆ ತಕ್ಕಂತೆ ತಮ್ಮ ರೆಕ್ಕೆಗಳ ಬಣ್ಣವನ್ನು, ಬದಲಾಯಿಸುತ್ತವೆ. ಸೆರೆಲಿಮನ್‍ಗಳು, ಇವನಿಂಗ್ ಬ್ರೌನ್‍ಗಳು, ರಿಂಗ್‍ಗಳು ಮತ್ತು ಇನ್ನಿತರ ಚಿಟ್ಟೆ ಪ್ರಭೇದಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ ``ಒಣಕಾಲ ರೂಪವನ್ನು ಪಡೆಯುತ್ತವೆ. ಆಗ ಅವುಗಳ ರೆಕ್ಕೆಗಳ ಮೇಲೆ ಇರುವ ಉಂಗುರಗಳು ಮತ್ತು ಪಟ್ಟೆಗಳು ಮಾಸಿ ಅವು ಬೂದಿ ಬಣ್ಣವನ್ನು ಹೊಂದುತ್ತವೆ. ಇದು ಸೂರ್ಯನ ಬೆಳಕನ್ನು ಪ್ರತಿಬಿಂಬಿಸಿ ದೇಹದ ಶಾಖವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ. ಇದೇ ರೀತಿ ಚಳಿಗಾಲದಲ್ಲಿ ಇವುಗಳು ``ತೇವಕಾಲ ರೂಪವನ್ನು ಹೊಂದುತ್ತವೆ. ಆಗ ಅವುಗಳ ರೆಕ್ಕೆಗಳ ಮೇಲೆ ಕಪ್ಪು ಉಂಗುರಗಳು ಹಾಗೂ ಪಟ್ಟಿಗಳು ಕಾಣಿಸಿಕೊಂಡು ಇದು ಸೂರ್ಯನ ಶಾಖವನ್ನು ಹಿಡಿದಿಡಲು ಅನುಕೂಲ ಮಾಡುತ್ತದೆ. 

3. ಒಂದೇ ಪ್ರಭೇದದ ಚಿಟ್ಟೆಗಳಲ್ಲಿ ಕಂಡುಬರುವ ಬಣ್ಣ ವ್ಯತ್ಯಾಸ ಕೆಲವು ಪ್ರಭೇದದ ಚಿಟ್ಟೆಗಳಲ್ಲಿ ಒಂದಕ್ಕಿಂತ ಹೆಚ್ಚು ರೂಪಗಳನ್ನು ಕಾಣಬಹುದು. ಈ ರೀತಿಯ ವ್ಯತ್ಯಾಸವನ್ನು ಮತ್ತೆ ಎರಡು ರೀತಿಯಲ್ಲಿ ವಿಂಗಡಿಸಬಹುದು.

ಅ)ಲಿಂಗಗಳಲ್ಲಿನ ಹಲವು ರೂಪಗಳು : ಇದರಲ್ಲಿ ಒಂದೇ ಪ್ರಭೇದದ ಗಂಡು ಮತ್ತು ಹೆಣ್ಣು ಚಿಟ್ಟೆಗಳು ಹಲವು ರೂಪಗಳಲ್ಲಿ ಕಂಡುಬರುತ್ತವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ `ಕೌಮನ್ ಮಾರ್ಮನ್ ಈ ಪ್ರಭೇದದ ಹೆಣ್ಣು ಚಿಟ್ಟೆಗಳು ಮೂರು ರೂಪಗಳನ್ನು ಹೊಂದಿದೆ. ಅವೆಂದರೆ ಗಂಡನ್ನು ಹೋಲುವ ರೂಪ, ``ಕ್ರೆಮ್‍ಸನ್ ರೋಸ್ ಎಂಬ ಪ್ರಭೇದವನ್ನು ಅಣಕಿಸು ಒಂದು ರೂಪ ಮತ್ತು ``ಕೌಮನ್‍ರೋಸ್ ಎಂಬ ಪ್ರಭೇದವನ್ನು ಅಣಕಿಸುವ ರೂಪ.

ಆ)ವಿವಿಧ ಪ್ರದೇಶಗಳಲ್ಲಿ ಕಂಡು ಬರುವ ವಿವಿಧ ರೂಪಗಳು : ಇದರಲ್ಲಿ ಒಂದೇ ಪ್ರಭೇದದ ಚಿಟ್ಟೆಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೂಪವನ್ನು ಹೊಂದಿರುತ್ತವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಹಿಮಾಲಯದಲ್ಲಿ ಸಿಗುವ ``ಇಂಡಿಯನ್ ವೈಟ್ ಅಡ್‍ಮಿರಲ್ ಇವು ಒಟ್ಟು 5 ರೂಪಗಳನ್ನು ಹೊಂದಿದ್ದು, ಒಂದೊಂದು ಪರ್ವತಶ್ರೇಣಿಯಲ್ಲಿ ಒಂದೊಂದು ರೂಪದಲ್ಲಿ ಕಾಣಬಹುದು.

4)ವೈಯಕ್ತಿಕ ವ್ಯತ್ಯಾಸ : ಕೆಲವು ಪ್ರಭೇದದ ಚಿಟ್ಟೆಗಳಲ್ಲಿ ರೂಪಗಳ ವ್ಯತ್ಯಾಸ ವಂಶಪಾರಂಪರ್ಯವಾಗಿರದೆ ಅದು ಕೇವಲ ವೈಯಕ್ತಿಕ ಚಿಟ್ಟೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅಂದರೆ ಕೆಲವು ಪ್ರಭೇದದ ಚಿಟ್ಟೆಗಳು ತಮ್ಮ ಸುತ್ತಮುತ್ತಲಿನ ಪರಿಸರಕ್ಕೆ ತಕ್ಕ ಹಾಗೆ ತಮ್ಮ ರೂಪವನ್ನು ಮಾರ್ಪಾಟು ಮಾಡಿಕೊಳ್ಳುತ್ತವೆ ಹಾಗೂ ಈ ಬದಲಾವಣೆ ಕೇವಲ ಆ ಚಿಟ್ಟೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ರೀತಿಯ ವೈಯಕ್ತಿಕ ವ್ಯತ್ಯಾಸ ತೋರುವ ಚಿಟ್ಟೆ ಪ್ರಭೇದಗಳೆಂದರೆ ``ಬ್ಲೂ ಓಕಾಲೀಫ್ ಮತ್ತು ``ಇವನಿಂಗ್ ಬ್ರೌನ್‍ಗಳು

ಹಾರುವ ಕೌಲಗಳು : ಹಲವು ಪ್ರಭೇದದ ಚಿಟ್ಟೆಗಳನ್ನು ವರ್ಷದ ಕೆಲವು ತಿಂಗಳುಗಳಲ್ಲಿ ಮಾತ್ರ ಹಾರುವುದನ್ನು ಮಾತ್ರ ಕಾಣಬಹುದು. ಈ ಒಂದು ಸಮಯಕ್ಕೆ ``ಹಾರುವ ಕೌಲ ಎಂದು ಕರೆಯುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಮೊಟ್ಟೆಯು ವಯಸ್ಕ ಚಿಟ್ಟೆಯಾಗಿ ಮಾರ್ಪಾಟಾಗಲು ಬೇಕಾದಂತಹ ಸಮಯ. ಚಿಟ್ಟೆ ಮೊಟ್ಟೆಗಳು ವಯಸ್ಕ ಚಿಟ್ಟೆಗಳಾಗಿ ಬೆಳವಣಿಗೆ ಹೊಂದಲು ಸುಮಾರು ಮೂರರಿಂದ ನಾಲ್ಕು ತಿಂಗಳುಗಳೂ ಹಿಡಿಯುತ್ತದೆ. ಕೆಲವು ಪ್ರಭೇದಗಳಲ್ಲಿ ಅನುಕೂಲಕರ ವಾತಾವರಣ ಬರುವವರೆಗೆ ವಯಸ್ಕ ಚಿಟ್ಟೆಗಳಾಗಿ ಮಾರ್ಪಾಟಗುವುದಿಲ್ಲ. ಇಂತಹ ಪ್ರಭೇದದ ಚಿಟ್ಟೆಗಳ ರೋಗಗಳು ವಯಸ್ಕ ಚಿಟ್ಟೆಗಳಾಗಿ ಮಾರ್ಪಾಟಾಗಲು ಸುಮಾರು 8 ರಿಂದ 9 ತಿಂಗಳು ತೆಗೆದುಕೊಳ್ಳುತ್ತವೆ. ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮೊಟ್ಟೆ ಇಡುವ ಪ್ರಭೇದಗಳಿಗೆ ಕ್ರಮವಾಗಿ ``ಯೂನಿವೋಲ್ಟೇನ್ ಮತ್ತು ``ಬೈವೋಲ್ಟೇನ್ ಎಂದು ಕರೆಯುತ್ತಾರೆ. ಕೆಲವು ಪ್ರಭೇದಗಳಲ್ಲಿ ಹೆಣ್ಣು ಚಿಟ್ಟೆಗಳು ವರ್ಷದಲ್ಲಿ ಹಲವು ಬಾರಿ ಮೊಟ್ಟೆ ಇಡುತ್ತವೆ. ಇಂತಹ ಪ್ರಭೇದಗಳನ್ನು ನಾವು ವರ್ಷ ಪೂರ್ತಿ ಪ್ರೌಢ ಚಿಟ್ಟೆಯ ಹಂತದಲ್ಲಿ ಕಾಣಬಹುದು. ``ಹಾರುವ ಕಾಲಗಳು ಹಾಗೂ ಮೊಟ್ಟೆ ಹಾಕುವ ಸಮಯ ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಅವೆಂದರೆ ``ಆಹಾರ ಸಸ್ಯ ಲಭ್ಯತೆ ಶಾಖ ಮತ್ತು ತೇವಾಂಶ.

ಚಿಟ್ಟೆಗಳ ವರ್ಣ ವೈವಿಧ್ಯತೆ : ಪ್ರೌಢ ಚಿಟ್ಟೆಗಳ ಬಣ್ಣ ಹುರುಪೆ ಮತ್ತು ಕೂದಲುಗಳಲ್ಲಿರುತ್ತದೆ. ಇವುಗಳ ಬಣ್ಣ ಎರಡು ತೆರನಾದುದು. ರಾಚನಿಕ ಮತ್ತು ವರ್ಣಕೀಯ. ಚಿಟ್ಟೆಯ ಮೈಯ ರಿಫ್ರೇಕ್ಷಣಾಂಶಕ್ಕೂ ಗಾಳಿಯ ರಿಫ್ರೇಕ್ಷಣಾಂಶಕ್ಕೂ ವ್ಯತ್ಯಾಸವಿರುವುದರಿಂದ ಬೆಳಕು ಚಿಟ್ಟೆಯ ಮೈಯಿಂದ ಗಾಳಿಯಲ್ಲಿ ಹಾಯುವಾಗ ತನ್ನ ಘಟಕ ಅಲೆಯುದ್ಧಗಳಾಗಿ ಒಡೆಯುವುದರಿಂದ ಚಿಟ್ಟೆಯ ಮೈ ವರ್ಣರಂಜಿತವಾಗಿ ಕಾಣುತ್ತದೆ. ಇದೇ ರಾಚನಿಕ ಬಗೆಯ ಬಣ್ಣ, ಈ ಕ್ರಿಯೆಯಿಂದ ನೀಲಿ, ಬಿಳಿ, ಚಿನ್ನ ಮುಂತಾದ ಬಣ್ಣಗಳು ಉಂಟಾಗುತ್ತದೆ. ವರ್ಣಕೀಯ ಬಣ್ಣ ವೈವಿಧ್ಯಕ್ಕೆ ಚಿಟ್ಟೆಯ ಹುರುಪೆ ಹಾಗೂ ಕೂದಲುಗಳಲ್ಲಿ ಅಡಕವಾಗಿರುವ ವರ್ಣಕಗಳು ಕಾರಣ. ಅನೇಕ ಚಿಟ್ಟೆಗಳಲ್ಲಿ ಬಿಳಿ, ಹಳದಿ, ಹಸಿರು, ಕೆಂಪು ಬಣ್ಣಗಳು ದೇಹದಲ್ಲಿಯೇ ಉತ್ಪತ್ತಿಯಾಗುತ್ತದೆ. ವಲಸೆ ಪಕ್ಷಿಗಳು ವಲಸೆಹೋಗುವುದು ನಮಗೆ ತಿಳಿದಿರುವ ಪಕ್ಷಿಗಳಂತೆ, ಚಿಟ್ಟೆಗಳು ಮತ್ತು ಪತಂಗಗಳು ವಲಸೆಹೋಗುತ್ತವೆ. ಚಿಟ್ಟೆಗಳಲ್ಲಿ ವಲಸೆಗೆ ಹೆಚ್ಚು ಪ್ರಸಿದ್ಧಿಹೊಂದಿರುವ ಪ್ರಭೇದವೆಂದರೆ ``ಮೊನಾರ್ಕ್ ಚಿಟ್ಟೆಗಳು. ಇವುಗಳು ಉತ್ತರ ಹಾಗೂ ದಕ್ಷಿಣ ಅಮೇರಿಕಾ ನಡುವೆ ವಲಸೆ ಹೋಗುತ್ತವೆ. ವಲಸೆ ಸಮಯದಲ್ಲಿ ಇವು ಕ್ರಮಿಸುವ ದೂರ ಸುಮಾರು 3200 ಮೈಲುಗಳು.
ಭಾರತದಲ್ಲಿ ಕೂಡ ಕೆಲವು ಚಿಟ್ಟೆ ಪ್ರಭೇದಗಳು ಪಶ್ಚಿಮ ಘಟ್ಟಗಳು ಹಾಗೂ ದಕ್ಷಿಣ ಭಾರತದ ಬಯಲುಗಳ ನಡುವೆ ವಲಸೆಹೋಗುತ್ತವೆ. ಭಾರತದಲ್ಲಿ ಸಾಮಾನ್ಯವಾಗಿ ವಲಸೆಹೋಗುವ ಪ್ರಭೇದಗಳೆಂದರೆ ``ಡಾರ್ಕ್ ಬ್ಲೂ ಟೈಗರ್ ಮತ್ತು ``ಡಬಲ್ ಬ್ರಾಂಡೆಡ್ ಕ್ರೋಗಳು ಇದಲ್ಲದೆ ``ಎಮಿಗ್ರೆಂಟುಗಳು, ``ಪೀ ಬ್ಲೂಗಳು ಮತ್ತು ``ಲೈಮ್ ಚಿಟ್ಟೆಗಳು ಕೂಡ ವಲಸೆ ಹೋಗುವುದುಂಟು. ``ಡಾರ್ಕ್ ಬ್ಲೂ ಟೈಗರ್ ಹಾಗೂ ``ಡಬಲ್ ಬ್ರಾಂಡೆಡ್ ಕ್ರೋಗಳ ವಲಸೆಯನ್ನು ಅಕ್ಟೋಬರ್, ನವೆಂಬರ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬೆಂಗಳೂರು, ಮಂಡ್ಯ, ಮೇಲುಕೋಟೆ, ಮೈಸೂರು, ಬಂಡೀಪುರ ಹಾಗೂ ಹಲವು ಪ್ರದೇಶಗಳಲ್ಲಿ ಕಾಣಬಹುದು. ಹಲವು ನೀಲಿ ಹಾಗೂ ಕಪ್ಪುಬಣ್ಣದ ಚಿಟ್ಟೆಗಳು ಒಂದರ ಹಿಂದೆ ಒಂದು, ಒಂದೇ ದಿಕ್ಕಿನಲ್ಲಿ ಸುಮಾರು ಹೊತ್ತು ಹಾರುವುದನ್ನು ಕಂಡರೆ ನಾವು ಅದನ್ನು ವಲಸೆ ಎಂದು ಪರಿಗಣಿಸಬಹುದು. ವಲಸೆ ಹೋಗಲು ಮುಖ್ಯವಾದ ಕಾರಣಗಳೆಂದರೆ ``ಆಹಾರ ಸಸ್ಯದ ಲಭ್ಯತೆ ಹಾಗೂ ಋತುಮಾನದಲ್ಲಿನ ಬದಲಾವಣೆ. ಸರಿಯಾದ ಅಧ್ಯಯನ ನಡೆಯದ ಕಾರಣ ಭಾರತದ ಚಿಟ್ಟೆಗಳ ವಲಸೆಯ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಿಲ್ಲ. ಪ್ರೌಢ ಚಿಟ್ಟೆಗಳು ಹಲವು ದಿನಗಳಿಂದ ಹಲವು ತಿಂಗಳುಗಳ ಕಾಲ ಜೀವಿಸಬಲ್ಲವು. ವಯಸ್ಕ ಚಿಟ್ಟೆಗಳ ಮುಖ್ಯ ಉದ್ದೇಶವೆಂದರೆ ಶತ್ರುಗಳಿಂದ ತಮ್ಮನ್ನು ರಕ್ಷಿಸಿಕೊಂಡು, ಸಂಗಾತಿಯನ್ನು ಕೂಡಿ ತನ್ನ ವಂಶವಾಹಿನಿಯನ್ನು ಮುಂದುವರೆಸಿಕೊಂಡು ಹೋಗುವುದು.

ಚಿಟ್ಟೆ ಪ್ರಭೇದಗಳು : ಪ್ರಪಂಚದಲ್ಲಿ ಸುಮಾರು 17 ಸಾವಿರಕ್ಕಿಂತ ಹೆಚ್ಚು ಚಿಟ್ಟೆಗಳನ್ನು ಗುರುತಿಸಲಾಗಿದೆ. ಭಾರತದಲ್ಲಿ ಇದುವರೆಗೆ 1,501 ಚಿಟ್ಟೆಗಳನ್ನು ಗುರುತಿಸಿದ್ದಾರೆ. ಇದರಲ್ಲಿ ಹಲವು ಪ್ರಭೇದಗಳು ಕೇವಲ ಹಿಮಾಲಯ, ಸಿಕ್ಕಿಮ್, ಅಸ್ಸಾಮ್ ಮತ್ತು ಇತರ ಉತ್ತರ ಪೂರ್ವ ರಾಜ್ಯಗಳಲ್ಲಿ ಮಾತ್ರ ಕಂಡುಬರುತ್ತವೆ. ದಕ್ಷಿಣ ಭಾರತದಲ್ಲಿ ``ಡಾ|| ಹರೀಶ್ ಗಾಂವ್‍ಕರ್ ಎಂಬ ಚಿಟ್ಟೆ ವಿಜ್ಞಾನಿಯೊಬ್ಬರು ಸುಮಾರು 331 ಪ್ರಭೇದಗಳನ್ನು ಗುರುತಿಸಿದ್ದಾರೆ.

ಚಿಟ್ಟೆಗಳಲ್ಲಿ ಮುಖ್ಯವಾಗಿ 5 ಕುಟುಂಬಗಳಿವೆ. ಅವೆಂದರೆ
1. ಉಬ್ಬಿರುವ ಬಾಲ ಹೊಂದಿರುವ ಚಿಟ್ಟೆಗಳು 
(ಪ್ಯಾಪಿಲಿಯೋನಿಡೆ ಆರ್ ಸ್ವಾಲೋಟೇಲ್ಸ್)
2. ಬಿಳಿ ಮತ್ತು ಹಳದಿ ಚಿಟ್ಟೆಗಳು 
ಪೈರಿಡೇ: ವೈಟ್ಸ್ ಅಂಡ್ ಯೆಲ್ಲೋಸ್
3. ಬ್ರಶ್‍ನಂತೆ ಪಾದವುಳ್ಳ ಚಿಟ್ಟೆಗಳು 
(ವಂಫಾಲಿಡೇ ಆರ್ ಬ್ರಶ್ ಫೋಟೆಡ್)
4. ನೀಲಿಗಳು 
(ಲೈಕಾನಿಡೇ ಆರ್ ಬ್ಲೂಸ್)
5. ಜಿಗಿತಗಾರ ಚಿಟ್ಟೆಗಳು, 
(ಹೆಸ್ಪಿರಿಡೆ ಆರ್ ಸ್ಕಿಪ್ಪರ್ಸ್)

ಉಬ್ಬಿರುವ ಬಾಲವುಳ್ಳ ಚಿಟ್ಟೆಗಳು : ಈ ಕುಟುಂಬಕ್ಕೆ ಸೇರಿದ ಚಿಟ್ಟೆಗಳಲ್ಲಿ ಹಿಂದಿನ ರೆಕ್ಕೆಗಳ ತುದಿಯಲ್ಲಿ ಉಬ್ಬಿದ ಬಾಲದ ರೀತಿಯಲ್ಲಿ ಇರುವ ಕಾರಣ ಈ ಹೆಸರು ಬಂದಿದೆ. ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ ಒಂದು ಉಪಕುಟುಂಬ ಮಾತ್ರ ಕಂಡು ಬರುತ್ತದೆ. ಪ್ರಪಂಚದಲ್ಲಿ ಈ ಕುಟುಂಬಕ್ಕೆ ಸೇರಿದ 700 ಪ್ರಭೇದಗಳಿದ್ದು, ಭಾರತದಲ್ಲಿ 107 ಪ್ರಭೇದಗಳು ಕಂಡು ಬರುತ್ತದೆ. ದಕ್ಷಿಣ ಭಾರತದಲ್ಲಿ 19 ಪ್ರಭೇದಗಳಿವೆ. ಈ ಕುಟುಂಬಕ್ಕೆ ಸೇರಿದ ಎಲ್ಲಾ ಚಿಟ್ಟೆಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಅತ್ಯಂತ ಸುಂದರವಾಗಿವೆ. ಭಾರತದ ಅತ್ಯಂತ ದೊಡ್ಡ ಚಿಟ್ಟೆಯಾದ ``ಸದರ್ನ್ ಬರ್ಡ್‍ವಿಂಗ್ ಈ ಕುಟುಂಬಕ್ಕೆ ಸೇರುತ್ತದೆ. ಈ ಚಿಟ್ಟೆಯ ರೆಕ್ಕೆಯ ಅಗಲ 140 ರಿಂದ 190 ಮೀ. ಅಷ್ಟು ಇದ್ದು ಹಾರುವಾಗ ಚಿಕ್ಕ ಪಕ್ಷಿಯಂತೆ ಕಾಣುತ್ತದೆ. ಈ ಕುಟುಂಬಕ್ಕೆ ಸೇರಿದ ``ಲೈಮ್ ಚಿಟ್ಟೆಯು ಹತ್ತಿರದ ಪ್ರದೇಶಗಳಿಗೆ ವಲಸೆ ಹೋಗುತ್ತದೆ.

ಬಿಳಿ ಮತ್ತು ಹಳದಿ ಚಿಟ್ಟೆಗಳು : ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 2 ಉಪಕುಟುಂಬಗಳಿವೆ. ಈ ಕುಟುಂಬಕ್ಕೆ ಸೇರಿದ ಸುಮಾರು 109 ಪ್ರಭೇದಗಳು ಭಾರತದಲ್ಲಿ ಸಿಗುತ್ತವೆ ಹಾಗೂ ದಕ್ಷಿಣ ಭಾರತದಲ್ಲಿ 35 ಪ್ರಭೇದಗಳು ಕಾಣಸಿಗುತ್ತವೆ.
ಹೆಸರೇ ಹೇಳುವಂತೆ ಈ ಕುಟುಂಬಕ್ಕೆ ಸೇರಿದ ಎಲ್ಲಾ ಚಿಟ್ಟೆಗಳು ಬಿಳಿ ಅಥವಾ ಹಳದಿ ಬಣ್ಣಗಳಿಂದ ಕೂಡಿವೆ. ಈ ಕುಟುಂಬಕ್ಕೆ ಸೇರಿದ ``ಎಮಿಗ್ರೆಂಟ್ ಚಿಟ್ಟೆಗಳು ಹತ್ತಿರದ ಪ್ರದೇಶಗಳಿಗೆ ಒಲಸೆ ಹೋಗುತ್ತವೆ. ನಿತ್ಯಹರಿದ್ವರ್ಣ ಕಾಡುಗಳಲ್ಲಿ ``ಆಲ್‍ಬಟ್ರೋಸ್ ಎಂಬ ಚಿಟ್ಟೆಯೂ ಸಹ ವಲಸೆ ಹೋಗುತ್ತದೆ. ಈ ಕುಟುಂಬಕ್ಕೆ ಸೇರಿದ ಹಲವು ಚಿಟ್ಟೆಗಳು ಯಾವುದೇ ರೀತಿಯ ವಿಷವನ್ನು ಹೊಂದಿರದ ಕಾರಣ ಪಕ್ಷಿಗಳಿಗೆ, ಉರಗಗಳಿಗೆ ಹಾಗೂ ಜೇಡಗಳಿಗೆ ಅತ್ಯಂತ ಸುಲಭವಾಗಿ ತುತ್ತಾಗಿವೆ. ಆಂಗ್ಲಭಾಷೆಯಲ್ಲಿ ``ಬಟರ್‍ಫ್ಲೈ (ಃuಣಣeಡಿಜಿಟಥಿ) ಎಂಬ ಪದ ಬಂದಿರುವುದು ಈ ಕುಟುಂಬಕ್ಕೆ ಸೇರಿದ ಚಿಟ್ಟೆಗಳಿಂದಲೇ. ಆಂಗ್ಲ ಭಾಷೆಯಲ್ಲಿ `ಬಟರ್ ಎಂದರೆ ಬೆಣ್ಣೆ ಎಂದು ಅರ್ಥ. ಬಟರ್‍ನಂತೆ ಬಣ್ಣ ಹೊಂದಿರುವ ಹಾಗೂ ಹಾರುವ ಕೀಟಗಳಿಗೆ ``ಬಟರ್‍ಫ್ಲೈ ಎಂದು ಕರೆದಿದ್ದಾರೆ. ಈ ಗುಂಪಿಗೆ ಸೇರಿದ ಹಲವು ಪ್ರಭೇದಗಳು ಗುಂಪಲ್ಲಿ ತೇವಾಂಶವಿರುವ ಮಣ್ಣಿನಲ್ಲಿ ಕುಳಿತು ಲವಣಾಂಶವನ್ನು ಹೀರುತ್ತವೆ. ವಿಜ್ಞಾನಿಗಳು ಈ ರೀತಿ ಮಣ್ಣು ಮುಕ್ಕುವ ಪ್ರಭೇದಗಳಲ್ಲಿ ಹೆಚ್ಚಾಗಿ ಗಂಡು ಚಿಟ್ಟೆಗಳು ಮಾತ್ರ ಈ ಚಟುವಟಿಕೆಯಲ್ಲಿ ಪಾಲುಗೊಳ್ಳುತ್ತದೆಂದು ಕಂಡು ಹಿಡಿದಿದ್ದಾರೆ. 

ಬ್ರಶ್‍ನಂತೆ ಪಾದವಿರುವ ಚಿಟ್ಟೆಗಳು : ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 8 ಉಪಕುಟುಂಬಗಳು ಕಂಡು ಬರುತ್ತವೆ, ಭಾರತದಲ್ಲಿ ಸುಮಾರು 520 ಪ್ರಭೇದಗಳಿದ್ದು, ದಕ್ಷಿಣ ಭಾರತದಲ್ಲಿ 109 ಪ್ರಭೇದಗಳು ಸಿಗುತ್ತದೆ. ಈ ಕುಟುಂಬಕ್ಕೆ ಸೇರಿದ ಚಿಟ್ಟೆಗಳಲ್ಲಿ ಮೊದಲ ಜೋಡಿ ಕೌಲುಗಳು ಸರಿಯಾಗಿ ವಿಕಾಸಗೊಳ್ಳದೆ ಬ್ರಶ್‍ನಂತೆ ಇರುವ ಕಾರಣ ಈ ಹೆಸರು ಬಂದಿದೆ. ಈ ಕುಟುಂಬಕ್ಕೆ ಸೇರಿದ ಸಾಮಾನ್ಯ ಚಿಟ್ಟೆ ಪ್ರಭೇದಗಳೆಂದರೆ ರಿಂಗುಗಳು, ನವಾಬುಗಳು, ರಾಜಗಳು, ಕ್ಯೌಸ್ಟರ್‍ಗಳು, ಫ್ಯಾನ್ಸಿಗಳು, ಇತರೆ ``ಡಾನೈನೆ ಉಪಕುಟುಂಬಕ್ಕೆ ಸೇರಿದ ``ಟೈಗರ್‍ಗಳು ಹಾಗೂ `ಕ್ರೋಗಳು ವಲಸೆಗೆ ಪ್ರಸಿದ್ಧಿಯಾಗಿವೆ. 

ನೀಲಿಗಳು : ಈ ಕುಟುಂಬಕ್ಕೆ ಸೇರಿದ ಸುಮಾರು ಎಲ್ಲಾ ಚಿಟ್ಟೆಗಳಲ್ಲಿ ಮೇಲಿನ ಭಾಗದಲ್ಲಿ ನೀಲಿ ಬಣ್ಣವಿದ್ದು ಇವಕ್ಕೆ ``ನೀಲಿಗಳು ಎಂಬ ಹೆಸರು ಬಂದಿದೆ. ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 5 ಉಪಕುಟುಂಬಗಳಿದ್ದು, 450 ಪ್ರಭೇದಗಳಿವೆ. ದಕ್ಷಿಣ ಭಾರತದಲ್ಲಿ ಸುಮಾರು 100 ಪ್ರಭೇದಗಳಿವೆ. ಭಾರತದ ಅತ್ಯಂತ ಚಿಕ್ಕ ಗಾತ್ರದ ಚಿಟ್ಟೆಯಾದ ``ಗ್ರಾಸ್ ಜ್ಯುಯೆಲ್ ಈ ಕುಟುಂಬಕ್ಕೆ ಸೇರಿದೆ. ``ಪೀ ಬ್ಲೂ ಎಂಬ ಚಿಟ್ಟೆಯು ಹತ್ತಿರ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ಈ ಕುಟುಂಬಕ್ಕೆ ಸೇರಿದ ಸಾಮಾನ್ಯ ಚಿಟ್ಟೆ ಪ್ರಭೇದಗಳೆಂದರೆ ಪೈರೋಗಳು, ಸಿಲ್ವರ್‍ಲೈನ್‍ಗಳು, ಓಕ್‍ಬ್ಲೂಗಳು, ಗ್ರಾಸ್‍ಬ್ಲೂಗಳು, ರಾಯಲ್‍ಗಳು, ಲೈನ್ ಬ್ಲೂಗಳು ಇತರೆ.

ಜಿಗಿತಗರ ಚಿಟ್ಟೆಗಳು : ಈ ಕುಟುಂಬದ ಚಿಟ್ಟೆಗಳಲ್ಲಿ ಎದೆಯ ಭಾಗವು ಹೊಟ್ಟೆಯ ಭಾಗಕ್ಕಿಂತ ಪ್ರಾಮುಖ್ಯವಾಗಿದ್ದು, ಇವುಗಳು ವೇಗವಾಗಿ ಹಾರಲು ಅನುಕೂಲವಾಗಿವೆ. ಈ ಕುಟುಂಬಕ್ಕೆ ಸೇರಿದ ಚಿಟ್ಟೆ ಪ್ರಭೇದಗಳು ಸಾಮಾನ್ಯವಾಗಿ ಒಂದೇ ಕಡೆ ಹೆಚ್ಚು ಹೊತ್ತು ಕೂರದೆ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಅತ್ಯಂತ ವೇಗವಾಗಿ ಹಾರುವ ಕಾರಣ ಈ ಹೆಸರು ಬಂದಿದೆ.
ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 3 ಉಪಕುಟುಂಬಗಳಿದ್ದು, 320  ಪ್ರಭೇದಗಳಿವೆ. ದಕ್ಷಿಣ ಭಾರತದಲ್ಲಿ ಸುಮಾರು 95 ಪ್ರಭೇದಗಳಿವೆ. ಈ ಕುಟುಂಬದ ಹಲವು ಚಿಟ್ಟೆಗಳು ತಮ್ಮ ಕೋಶವನ್ನು, ಎಲೆಯನ್ನು ಮಡಚಿ ಅದರಲ್ಲಿ ರಚಿಸುತ್ತದೆ. ಈ ಕುಟುಂಬಕ್ಕೆ ಸೇರಿದ ಹಲವು ಚಿಟ್ಟೆಗಳ ಚಟುವಟಿಕೆ ರಾತ್ರಿ ಮಾತ್ರ.

ಪರಿಸರದಲ್ಲಿ ಚಿಟ್ಟೆಗಳ ಮಹತ್ವ  : ಚಿಟ್ಟೆಗಳು ಪರಗಸ್ಪರ್ಶಕ್ರಿಯೆಗೆ ಅತ್ಯಂತ ಪ್ರಸಿದ್ಧಿಯಾಗಿದ್ದರೂ, ಇತರ ಕೀಟಗಳಿಗೆ ಹೋಲಿಸಿದರೆ ಇವುಗಳ ಪಾತ್ರ ಅತ್ಯಂತ ಕಡಿಮೆ. ಚಿಟ್ಟೆಗಳ ಪ್ರಮುಖ ಪಾತ್ರವೆಂದರೆ ಆಹಾರ ಸರಪಳಿಯಲ್ಲಿ ಹೆಚ್ಚಿನ ಮಟ್ಟದಲ್ಲಿ  ಭಾಗವಹಿಸಿ ಪರಿಸರದ ಸಮತೋಲನವನ್ನು ಕಾಪಾಡುವುದು. ಉರಗಗಳು, ಪಕ್ಷಿಗಳು ಹಾಗೂ ಹಲವು ಕೀಟವರ್ಗಗಳು ಚಿಟ್ಟೆಗಳ ಮೆಲೆ ಆಹಾರಕ್ಕಾಗಿ ಅವಲಂಭಿಸಿವೆ. ಕೇವಲ ವಯಸ್ಕ ಚಿಟ್ಟೆಗಳಲ್ಲದೆ, ಎಲ್ಲಾ ಹಂತಗಳಲ್ಲಿಯೂ ಇವು ಆಹಾರವಾಗಿದೆ. ಹಲವು ಬಗೆಯ ನೊಣಗಳು, ಕಣಜಗಳು ಹಾಗೂ ಇತರ ಚಿಕ್ಕ ಕೀಟಗಳು ತಮ್ಮ ಮೊಟ್ಟೆಗಳನ್ನು ಚಿಟ್ಟೆಯ ಮೊಟ್ಟೆಗಳಲ್ಲಿ ಇಡುತ್ತವೆ. ಈ ಮೊಟ್ಟೆಗಳು ತಾವು ಇರುವ ಚಿಟ್ಟೆಯ ಮೊಟ್ಟೆಗಿಂತ ಮುಂಚೆ ಒಡೆದು ಹೊರಬಂದು ನಂತರ ಚಿಟ್ಟೆ ಮೊಟ್ಟೆಯನ್ನು ಆಹಾರವಾಗಿ ಬಳಸಿಕೊಳ್ಳುತ್ತವೆ.
ಹಲವು ಬಗೆಯ ಕಣಜಗಳು ತಮ್ಮ ಮೊಟ್ಟೆಗಳನ್ನು ಕಂಬಳಿಹುಳದಲ್ಲಿ ಇಡುತ್ತವೆ. ಈ ಮೊಟ್ಟೆಗಳು ಒಡೆದು, ಕಣಜದ ಮರಿಗಳು ಕಂಬಳಿಹುಳವನ್ನು ತಿನ್ನುತ್ತವೆ, ನಂತರ ಕೋಶವನ್ನು ರಚಿಸುತ್ತವೆ. ಈ ರೀತಿಯ ಪರಿಸ್ಥಿತಿಗಳಲ್ಲಿ ಕಂಬಳಿಹುಳವು ತಕ್ಷಣ ಸಾಯದೆ, ನಿಧಾನವಾಗಿ ಸಾವನ್ನಪ್ಪುತ್ತದೆ. ಮತ್ತೆ ಕೆಲವು ಬಗೆಯ ಕಣಜಗಳು ಕಂಬಳಿಹುಳವನ್ನು ಎತ್ತಿಕೊಂಡು ಹಾರಿ ಹೋಗಿ, ಅದನ್ನು ಸಾಯಿಸದೆ ತನ್ನ ಗೂಡಿನಲ್ಲಿ ಬಿಟ್ಟು, ಅಲ್ಲಿ ತನ್ನ ಮೊಟ್ಟೆ ಇಟ್ಟು ಗೂಡನ್ನು ಮುಚ್ಚುತ್ತದೆ. ನಂತರ ಮೊಟ್ಟೆ ಒಡೆದು ಕಣಜದ ಮರಿಗಳು ಜೀವಂತ ಇರುವ ಕಂಬಳಿಹುಳವನ್ನು ತಿನ್ನುತ್ತವೆ. ಬೀ-ಈಟರ್‍ಗಳು, ಬುಲ್‍ಬುಲ್‍ಗಳು ಹಾಗೂ ಹಲವು ಚಿಕ್ಕಚಿಕ್ಕ ಪಕ್ಷಿಗಳು ಕಂಬಳಿಹುಳಗಳನ್ನು ಹಾಗೂ ವಯಸ್ಕ ಚಿಟ್ಟೆಗಳನ್ನು ತಿಂದು ಬದುಕುತ್ತವೆ. ಇದಲ್ಲದೆ ಗೂಸುಂಬೆಗಳು, ಹಲ್ಲಿಗಳೂ ಕೂಡ ಪತಂಗ ಹಾಗೂ ಚಿಟ್ಟೆಗಳನ್ನು ಯಥೇಚ್ಛವಾಗಿ ತಿನ್ನುತ್ತವೆ. ಕೆಲವು ಚಿಟ್ಟೆ ಪ್ರಭೇದಗಳು ಸಣ್ಣ ಪ್ರಮಾಣದಲ್ಲಿ ವಿಷವನ್ನು ಹೊಂದಿದ್ದು, ಯಾವುದೇ ಪಕ್ಷಿಯು ಇಂತಹ ಪ್ರಭೇದಗಳ ತಂಟೆಗೆ ಹೋಗುವುದಿಲ್ಲ. ಕೆಲವೊಮ್ಮೆ ಹೆಚ್ಚು ತಿಳುವಳಿಕೆ ಇರದ ಕೆಲವು ಮರಿಹಕ್ಕಿಗಳು ಇಂತಹ ಚಿಟ್ಟೆಗಳನ್ನು, ಹಿಡಿದು ತಿನ್ನಲು ಹೋಗಿ ಆನಂತರ ವಾಂತಿ ಮಾಡಿಕೊಳ್ಳುತ್ತವೆ. ಈ ರೀತಿಯ ವಿಷ ಚಿಟ್ಟೆ ಪ್ರಭೇದಗಳು ತಾವು ಕಂಬಳಿಹುಳದ ಹಂತದಲ್ಲಿರುವಾಗಲೇ ತಮ್ಮ ಆಹಾರ ಸಸ್ಯದಲ್ಲಿರುವ ಕೆಲವು ವಿಷಕಾರಿಯಾದ ರಾಸಾಯನಿಕಗಳನ್ನು ತಮ್ಮ ದೇಹದಲ್ಲಿ ಸಂಗ್ರಹಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಇಂತಹ ವಿಷಕಾರಿ ಚಿಟ್ಟೆಗಳು ಕೆಂಪು ಹಾಗೂ ಇತರ ಪ್ರಕಾಶಮಾನವಾದ ಬಣ್ಣಗಳನ್ನು ಹೊಂದಿದ್ದು, ತಮ್ಮ ಶತ್ರುಗಳಿಗೆ ತಾವು ವಿಷಕಾರಿಯಿಂದ ಬಣ್ಣದ ಮೂಲಕ ಸೂಚಿಸುತ್ತವೆ. ಅನೇಕ ಜೇಡ ಪ್ರಭೇದಗಳು ಇಂತಹ ವಿಷಕಾರಿ ಚಿಟ್ಟೆ ಪ್ರಭೇದಗಳನ್ನು ಹಿಡಿದು ತಿನ್ನುತ್ತವೆ. ಸಾಮಾನ್ಯವಾಗಿ ಕೆಲವು ಅತ್ಯಂತ ದೊಡ್ಡ ಚಿಟ್ಟೆಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಚಿಟ್ಟೆ ಪ್ರಭೇದಗಳನ್ನು ಜೇಡಗಳು ತಿನ್ನುತ್ತವೆ. ಚಿಟ್ಟೆಗಳಿಗೆ ಇಷ್ಟೊಂದು ನೈಸರ್ಗಿಕ ಶತ್ರುಗಳಿರುವ ಕಾರಣ ಕೇವಲ ಶೇಕಡಾ ಐದರಷ್ಟು ಚಿಟ್ಟೆಗಳು ಪ್ರೌಢ ಹಂತ ತಲುಪುತ್ತವೆ. ಕೆಲವು ಸಸ್ಯ ಪ್ರಭೇದಗಳು ಪರಾಗಸ್ಪರ್ಶಕ್ಕಾಗಿ ಕೇವಲ ಚಿಟ್ಟೆಗಳ ಮೇಲೆ ಅವಲಂಭಿಸಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮಾರ್ಗಡೆ ಅಥವಾ ಕೆಗ್ಗಣಿಕೆ. ಚಿಟ್ಟೆಗಳು ಮಕರಂದಕ್ಕಾಗಿ ಒಂದು ಹೂವಿನ ಮೇಲೆ ಕುಳಿತಾಗ, ಅವುಗಳ ಕಾಲುಗಳಿಗೆ ಹಾಗೂ ``ಲೇಬಿಯಲ್ ಪಲ್ಪ್ ಎಂಬ ಅಂಗಕ್ಕೆ ಪರಾಗವು ಅಂಟಿಕೊಳ್ಳುತ್ತದೆ. ಈ ಚಿಟ್ಟೆಯು ಅದೇ ಪ್ರಭೇದದ ಮತ್ತೊಂದು ಗಿಡದ ಮೇಲೆ ಕುಳಿತಾಗ ಪರಾಗಸ್ಪರ್ಶವಾಗುತ್ತದೆ.

 	ವಿಜ್ಞಾನಿಗಳು ತಮ್ಮ ಹಲವು ಸಂಶೋಧನೆಗಳಲ್ಲಿ ಚಿಟ್ಟೆಗಳನ್ನು ಹಾಗೂ ಪತಂಗಗಳನ್ನು ಬಳಸಿಕೊಳ್ಳುತ್ತಾರೆ. ಜೀವ ವಿಕಸನ `ಬಗೆಯ ಸಂಶೋಧನೆಗಳಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ. ಚಿಟ್ಟೆಗಳು ತಮ್ಮ ಆಹಾರ ಸಸ್ಯದ ಮೇಲೆ ಅವಲಂಬಿತವಾಗಿರುವ ಕಾರಣ, ಒಂದು ಜಾಗದ ಸಸ್ಯರಾಶಿ ಹಾಗೂ ಅಲ್ಲಿಯ ಪರಿಸರದ ಸ್ಥಿತಿಗತಿಯನ್ನು ಅಲ್ಲಿಯ ಚಿಟ್ಟೆಗಳನ್ನು ನೋಡಿಯೇ ನಿರ್ಧರಿಸಬಹುದು. ಥಾಯ್ಲೆಂಡ್ ಹಾಗೂ ಕೋಸ್ಟಾರಿಕಾ ದೇಶಗಳಲ್ಲಿ ಹಲವು ಮಂದಿ ಚಿಟ್ಟೆ ಉದ್ಯಾನಗಳನ್ನು ಇಟ್ಟುಕೊಂಡಿದ್ದಾರೆ. ಜನರು ದುಡ್ಡು ಕೊಟ್ಟು ಈ ಉದ್ಯಾನವನಗಳಲ್ಲಿ ಅಡ್ಡಾಡಬಹುದು ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧವಾದ ಮೈಸೂರು ರೇಷ್ಮೆ ಸೀರೆಗಳನ್ನು ಮಾಡುವುದು, ಒಂದು ರೀತಿಯ ಪತಂಗಗಳ ಕೋಶದ ರೇಷ್ಮೆಗಳನ್ನು ಉಪಯೋಗಿಸಿಕೊಂಡು. ಹಲವು ದೇಶಗಳಲ್ಲಿ ಭಾರತದ ಚಿಟ್ಟೆಗಳನ್ನು ಕಾನೂನುಬಾಹಿರವಾಗಿ ಕದ್ದೊಯ್ದು, ಅತ್ಯಂತ ಹೆಚ್ಚಿನ ಬೆಲೆಗಳಿಗೆ ಮಾರುತ್ತಾರೆ.ಇದಲ್ಲದೆ ಚೈನಾ, ಜಪಾನ್,	ಚಿಟ್ಟೆಗಳ ಸಂರಕ್ಷಣೆ : ಚಿಟ್ಟೆಗಳ ಹಾಗೂ ಅವುಗಳ ಆಹಾರಸಸ್ಯಗಳ ಸಂಬಂಧ ಅತ್ಯಂತ ಸೂಕ್ಷ್ಮವಾಗಿದೆ. ಅವುಗಳ ಆಹಾರ ಸಸ್ಯಗಳು ಮಾಯ ಆಗುತ್ತಿದ್ದಂತೆಯೇ, ಅದನ್ನು ಅವಲಂಭಿಸಿದ ಚಿಟ್ಟೆ ಪ್ರಭೇದಗಳು ಕ್ರಮೇಣವಾಗಿ ನಶಿಸಿಹೋಗುತ್ತವೆ. ಚಿಟ್ಟೆಗಳ ಜೀವನದ ಹಂತಗಳು ಹೊರಗಿನ ಉಷ್ಣತೆ,  ಬಿಸಿಲು ಹಾಗೂ ತೇವಾಂಶಗಳ ಮೇಲೆ ಹೆಚ್ಚಾಗಿ ಅವಲಂಬಿಸಿವೆ. ಆದ್ದರಿಂದ ಹೊರಗಿನ ವಾತಾವರಣದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಹ ಚಿಟ್ಟೆಗಳು ವಲಸೆಹೋಗುತ್ತವೆ ಅಥವಾ ತಾತ್ಕಾಲಿಕ ಸುಪ್ತತೆಯನ್ನು ತಲುಪುತ್ತವೆ.

	ಹಲವು ಚಿಟ್ಟೆಗಳು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಹುಲ್ಲುಗಾವಲದ ಕಣಿವೆ ಕಾಡುಗಳಲ್ಲಿ ಬದುಕುತ್ತವೆ. ಇಂತಹ ಪ್ರದೇಶಗಳನ್ನು `ಶೋಲಾ ಎಂದು ಕರೆಯುತ್ತಾರೆ. ಈ ಶೋಲಾಗಳ ಮಹತ್ವ ಅರಿಯದ ಹಲವರು, ಇದಕ್ಕೆ ಬೆಂಕಿ ಹಚ್ಚುತ್ತಾರೆ ಹಾಗೂ ತಮ್ಮ ದನಕರುಗಳನ್ನು ಮೇಯಲು ಬಿಡುತ್ತಾರೆ. ಇಂತಹ ಶೋಲಾಗಳಲ್ಲಿ ಜನರು ಹೋಗಿ ಹಾಳುಮಾಡದಂತೆ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

	ಇತ್ತೀಚೆಗೆ ರಾಸಾಯನಿಕ ಕೀಟನಾಶಕಗಳ ಬಳಕೆ ಹೆಚ್ಚುತ್ತಿದೆ. ಈ ಕೀಟನಾಶಕಗಳಿಂದ ಕಂಬಳಿಹುಳಗಳು ತಕ್ಷಣ ಸತ್ತುಹೋಗುತ್ತವೆ. ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಂತೆ ಇರುವ ಹಲವು ಟೀ ಮತ್ತು ಕಾಫೀ ತೋಟಗಳಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ಜಾಸ್ತಿ ಇರುವುದರಿಂದ ಅನೇಕ ಚಿಟ್ಟೆ ಪ್ರಭೇದಗಳು ದಿನದಿಂದ ದಿನೇ ಕಡಿಮೆ ಆಗುತ್ತಿದೆ.

	ಇದಲ್ಲದೆ ನಮ್ಮ ಕಾಡುಗಳಲ್ಲಿ ಪ್ಲಾಸ್ಟಿಕ್ ಕಸದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಡುಗಳಿಗೆ ಮೋಜಿಗಾಗಿ ಹೋಗುವ ಜನರು, ಎಲ್ಲಾ ಪ್ಲಾಸ್ಟಿಕ್ ಚೀಲಗಳನ್ನು ಹಾಗೂ ಸಾರಾಯಿ ಬಾಟಲಿಗಳನ್ನು ಅಲ್ಲೇ ಬಿಟ್ಟು ಬರುತ್ತಾರೆ. ಇಂತಹ ಪ್ಲಾಸ್ಟಿಕ್ ಚೀಲಗಳನ್ನು ತಿಂದ ಹಲವು ಪ್ರಾಣಿಗಳು ಸಾಯುತ್ತವೆ. ಅದಲ್ಲದೆ ಈ ಪ್ಲಾಸ್ಟಿಕ್ ಚೀಲಗಳು ಗಿಡಗಳ ಬೆಳವಣಿಗೆಯನ್ನು ಕುಂದಿಸುತ್ತವೆ. ಗಿಡಗಳ ಪ್ರಮಾಣ ಕುಂಠಿತವಾದರೆ ಇವುಗಳನ್ನು ಅವಲಂಭಿಸಿದ ಪ್ರಾಣಿ ಪಕ್ಷಿ ಹಾಗೂ ಕೀಟಗಳು ಕ್ರಮೇಣ ನಶಿಸಿಹೋಗುತ್ತಿದೆ. ಆದ್ದರಿಂದ ನಮ್ಮನ್ನು ನಾವು ಉಳಿಸಿಕೊಳ್ಳಬೇಕೆಂದರೆ ಮಾಡಬೇಕಾಗಿರುವ ಕೆಲಸಗಳೆಂದರೆ ಕಾಡುಗಳನ್ನು ಬೆಳೆಸುವುದು, ನೀರನ್ನು ಮಿತವಾಗಿ ಬಳಸುವುದು, ಪ್ಲಾಸ್ಟಿಕ್ ಅನ್ನು ಕಡಿಮೆ ಬಳಸುವುದು ಹಾಗೂ ನಮ್ಮ ವ್ಯಾಮೋಹಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಪರಿಸರದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು.

ಪರಿಷ್ಕರಣೆ:
ಕೆ.ಆರ್.ಕಿಶನ್‍ದಾಸ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ